ಬಾಂಗ್ಲಾದೇಶ ಕ್ರಿಕೆಟಿಗ ಶಾಕೀಬ್ ಅಲ್ ಹಸನ್ ವಿರುದ್ಧ ಕೊಲೆ ಪ್ರಕರಣ ದಾಖಲು
ಶಾಕೀಬ್ ಅಲ್ ಹಸನ್ | PC : PTI
ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್ರೌಂಡರ್ ಶಾಕಿಬ್ ಅಲ್ ಹಸನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ʼಢಾಕಾ ಟ್ರಿಬ್ಯೂನ್ʼ ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವೇಳೆ ಆಗಸ್ಟ್ 7ರಂದು ರಫೀಖುಲ್ ಇಸ್ಲಾಮ್ ಅವರ ಮಗ ರುಬೆಲ್ ರನ್ನು ಕೊಲೆಗೈಯ್ಯಲಾಗಿತ್ತು. ರಫೀಖುಲ್ ಅವರು ಕೇಸ್ ದಾಖಲಿಸಿದ್ದಾರೆ.
ಅಡಾಬೋರ್ನ ರಿಂಗ್ ರೋಡ್ ನಲ್ಲಿ ನಡೆದಿದ್ದ ರ್ಯಾಲಿಯೊಂದರಲ್ಲಿ ರುಬೆಲ್ ಭಾಗವಹಿಸಿದ್ದರು. ಅಲ್ಲಿ ಅವರ ಎದೆ ಹಾಗೂ ಹೊಟ್ಟೆಗೆ ಗುಂಡು ಹಾರಿಸಲಾಗಿತ್ತು ಎಂದು ವರದಿ ತಿಳಿಸಿದೆ. ಘಟನೆಯ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಆಗಸ್ಟ್ 7ರಂದು ಮೃತಪಟ್ಟಿದ್ದಾರೆ. ಢಾಕಾದ ಅಡಾಬೋರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಶಾಕೀಬ್ ರನ್ನು 28ನೇ ಆರೋಪಿ ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶದ ಜನಪ್ರಿಯ ನಟ ಫಿರ್ದೌಸ್ ಅಹ್ಮದ್ 55ನೇ ಆರೋಪಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಹೆಸರನ್ನೂ ಇತರ 154 ಜನರೊಂದಿಗೆ ಸೇರಿಸಲಾಗಿತ್ತು. ಸುಮಾರು 400-500 ಅಪರಿಚಿತ ವ್ಯಕ್ತಿಗಳು ಆರೋಪಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ.