ಪಾಕಿಸ್ತಾನಕ್ಕೆ ಅಳಿವು ಉಳಿವಿನ ಪಂದ್ಯ; ಭಾರತಕ್ಕೆ ಸೆಮೀಸ್ ಕಣ್ಣು

PC: x.com/IndiaToday
ದುಬೈ: ನ್ಯೂಯಾರ್ಕ್ ನ ಕಠಿಣ ಪಿಚ್ ನಲ್ಲಿ ಬದ್ಧ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡದ ವಿರುದ್ಧ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಗಳಿಸಿದ ನೆನಪು ಇನ್ನೂ ಹಸಿರಾಗಿರುವ ಮಧ್ಯೆಯೇ ಚಾಂಪಿಯನ್ಸ್ ಟ್ರೋಫಿ ಪಂದ್ಯ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿದೆ.
ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿರುವ ಭಾರತ ಸೆಮಿಫೈನಲ್ ನತ್ತ ದೃಷ್ಟಿ ಹಾಯಿಸಿದ್ದರೆ, 29 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆಯೋಜಿಸುತ್ತಿರುವ ಪಾಕಿಸ್ತಾನಕ್ಕೆ ಈ ಪಂದ್ಯ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ರವಿವಾರ ರಾತ್ರಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಟೂರ್ನಿಯ ಐದನೇ ಪಂದ್ಯವನ್ನು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಗುರುವಾರ ಮೊಹ್ಮದ್ ಶಮಿ ಅವರ ಐದು ವಿಕೆಟ್ ಸಾಧನೆ ಹಾಗೂ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರ ಅಜೇಯ 101 ರನ್ ಗಳ ನೆರವಿನೊಂದಿಗೆ ಬಾಂಗ್ಲಾದೇಶ ವಿರುದ್ಧ ಆರು ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ಶುಭಾರಂಭ ಮಾಡಿದೆ.
ಶಮಿ ಭರ್ಜರಿ ಫಾರ್ಮ್ ಗೆ ಮರಳುವ ಜತೆಗೆ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವ ವೇಗಿ ಹರ್ಷಿತ್ ರಾಣಾ ಹಾಗೂ ಭಾರತದ ಸ್ಪಿನ್ ತ್ರಿವಳಿಗಳು 29 ಓವರ್ ಗಳಲ್ಲಿ ಕೇವಲ 129 ರನ್ ಗಳನ್ನು ಬಿಟ್ಟುಕೊಟ್ಟಿರುವುದು ಭಾರತದ ಬೌಲಿಂಗ್ ಮೊನಚನ್ನು ತೋರಿಸುತ್ತದೆ. ಇದರಿಂದ ಮತ್ತೊಬ್ಬ ಸ್ಟಾಟ್ ಆಟಗಾರ ಜಸ್ ಪ್ರೀತ್ ಬೂಮ್ರಾ ಅವರ ಅನುಪಸ್ಥಿತಿ ತಂಡಕ್ಕೆ ಸಮಸ್ಯೆಯಾಗಿ ಕಾಣುತ್ತಿಲ್ಲ. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ 2006 ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ಸಾಧನೆಯನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಆದರೆ ರವೀಂದ್ರ ಜಡೇಜಾ ಹಾಗೂ ಕುಲದೀಪ್ ಯಾದವ್ ವಿಕೆಟ್ ಪಡೆಯದಿದ್ದರೂ ಮಿತವ್ಯಯ ಸಾಧಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್ ಉಪಯುಕ್ತ ಅಜೇಯ 41 ರನ್ ಸಿಡಿಸುವ ಮೂಲಕ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಬೇಗನೇ ಮುಗಿಸುವಲ್ಲಿ ಗಣನೀಯ ಕೊಡುಗೆ ನೀಡಿರುವುದು ಕೂಡ ಭಾರತಕ್ಕೆ ಉತ್ತೇಜನಕಾರಿ ಎನಿಸಿದೆ.
ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ತನ್ನೆಲ್ಲ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಜ್ಜಾಗಿದೆ.