ಪ್ಯಾರಿಸ್ ಒಲಿಂಪಿಕ್ಸ್ ನಲ್ಲೊಬ್ಬ ಸೀಕ್ರೆಟ್ ಏಜೆಂಟ್!
ನೋಡಲು ಸಾಮಾನ್ಯ ಅಂಕಲ್, ಆದರೆ ಪ್ರಚಂಡ ಶೂಟರ್ ಈ ಯೂಸುಫ್ ಡಿಕೆಕ್
PC : X \ @mistercredible
ಜೇಬಿಗೆ ಕೈ ಹಾಕಿಕೊಂಡು ಗೆಲುವು ಅಸಾಧ್ಯ ಅನ್ನುವ ಮಾತನ್ನು ಸುಳ್ಳು ಮಾಡಿದ್ದಾರೆ ಟರ್ಕಿಯ ಶೂಟಿಂಗ್ ತಾರೆ ಯೂಸುಫ್ ಡಿಕೆಕ್.
ಆತ ತರಬೇತಿ ಪಡೆದ ಶಾರ್ಪ್ ಶೂಟರ್ ಅಥವಾ ಸೀಕ್ರೆಟ್ ಏಜೆಂಟ್ ಇರಬೇಕು. ಆತನನ್ನೇ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಗೆ ಸ್ಪರ್ಧಿಯಾಗಿ ಟರ್ಕಿ ಕಳಿಸಿರಬೇಕು. ಆತ ಚಿನ್ನವನ್ನೂ ಸಲೀಸಾಗಿ ಗೆದ್ದು ಬಿಡುತ್ತಿದ್ದ, ಆದರೆ ಯಾರಿಗೂ ಆತನ ನಿಜವಾದ ವೃತ್ತಿ ಏನೆಂದು ತಿಳಿಯದಿರಲಿ ಎಂದು ಆತ ಬೇಕೆಂದೇ ಬೆಳ್ಳಿ ಗೆದ್ದಿದ್ದು.
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸೀರಿಯಸ್, ಕೆಲವು ತಮಾಷೆ, ಕೆಲವು ವ್ಯಂಗ್ಯಕ್ಕೆ ವಸ್ತುವಾದವರು ಟರ್ಕಿಯ ಶೂಟಿಂಗ್ ತಾರೆ ಯೂಸುಫ್ ಡಿಕೆಕ್. ಈಗ ವಾಟ್ಸ್ ಆಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಎಲ್ಲಿ ನೋಡಿದರೂ ಇದೇ ಯೂಸುಫ್ ಅವರ ಗುಣಗಾನ. ಅವರ ಫೋಟೋಗಳು ವೈರಲ್ ಆದಷ್ಟು ಯಾವ ಒಲಿಂಪಿಕ್ಸ್ ಚಿನ್ನ ವಿಜೇತನ ಫೋಟೋ ಕೂಡ ವೈರಲ್ ಆಗಿಲ್ಲ.
ಪ್ಯಾರಿಸ್ ಒಲಿಂಪಿಕ್ಸ್ ನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಟೀಂ ಶೂಟಿಂಗ್ನಲ್ಲಿ ಬೆಳ್ಳಿ ಗೆದ್ದವರು ಈ ಯೂಸುಫ್ ಡಿಕೆಕ್. ಬೆಳ್ಳಿ ಗೆದ್ದರೆ ಇಷ್ಟೆಲ್ಲಾ ಚರ್ಚೆ ಯಾಕೆ ? ಸಾಮಾನ್ಯವಾಗಿ ಸಂತೆಯಲ್ಲಿ, ಜಾತ್ರೆಯಲ್ಲಿ ಬಲೂನ್ ಶೂಟ್ ಮಾಡುವ ಸ್ಪರ್ಧೆ , ಅದರಲ್ಲಿ ಗೆದ್ದವರಿಗೆ ಬಹುಮಾನ ಅಂತ ಇಟ್ಟಿರುತ್ತಾರೆ. ನೀವು ನೋಡಿರಬಹುದು.
ಆ ಸ್ಪರ್ಧೆಯಲ್ಲಿ ಭಾಗವಹಿಸುವ ಅಂಕಲ್ ಗಳು ಹೇಗೆ ಕಾಣುತ್ತಾರೋ ಒಲಿಂಪಿಕ್ಸ್ ಬೆಳ್ಳಿ ಗೆದ್ದ ಸ್ಪರ್ಧೆಯಲ್ಲಿ ಹಾಗೆ ಕಾಣುತ್ತಾ ಇದ್ದರು ಈ ಯೂಸುಫ್. ಸಾಮಾನ್ಯ ಟೀ ಶರ್ಟ್, ಸಾಮಾನ್ಯ ಒಂದು ಟ್ರೋಸರ್ ಅಥವಾ ಪ್ಯಾಂಟ್, ಅದರ ಜೇಬಿನೊಳಗೆ ಎಡಗೈ, ಕಣ್ಣಿಗೆ ಯಾವುದೇ ವಿಶೇಷ ಕ್ರೀಡಾ ಕನ್ನಡಕವಿಲ್ಲ, ಒಂದು ಕಣ್ಣು ಮುಚ್ಚಿರುವಂತೆ ಬ್ಲಯಿಂಡರ್ ಇಲ್ಲ, ಕಿವಿಗೆ ಯಾವುದೇ ಶಬ್ದ ನಿರೋಧಕ ಕವಚವಿಲ್ಲ - ಹೀಗೆ ಬಂದು ಶೂಟ್ ಮಾಡಿ ಯಾರಾದರೂ ಜಾಗತಿಕ ಕ್ರೀಡಾಕೂಟದಲ್ಲಿ ಎಲ್ಲರನ್ನು ಹಿಂದಿಕ್ಕಿ ಬೆಳ್ಳಿ ಗೆಲ್ಲೋದು ಸಾಧ್ಯವೇ ?
ಇದು ಈಗ ವಿಶ್ವದೆಲ್ಲೆಡೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ. ಯೂಸುಫ್ ಒಲಿಂಪಿಕ್ಸ್ ಪದಕ ಗೆದ್ದಿರೋದು ಇದೇ ಮೊದಲ ಬಾರಿ. ಆದರೆ ನಾಲ್ಕು ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ. ಅಷ್ಟೇ ಅಲ್ಲ, ಇವರು ಏಳು ಬಾರಿ ಯುರೋಪಿಯನ್ ಚಾಂಪಿಯನ್ ಆಗಿದ್ದಾರೆ.
ಅಂದ ಹಾಗೆ, ಯೂಸುಫ್ ಸೀಕ್ರೆಟ್ ಏಜೆಂಟ್ ಅಲ್ಲ. ಆದರೆ ಟರ್ಕಿಯ ಸೇನೆಯ ಭಾಗವಾದ ಜೊಂಡಮರಿ ಜನರಲ್ ಕಮಾಂಡ್ ನ ನಾನ್ ಕಮಿಷನ್ಡ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೀಗ 51 ವಯಸ್ಸು. ಜನವರಿ 1 , 1973 ರಂದು ಜನಿಸಿದ ಯೂಸುಫ್ ಅಂಕಾರದ ಗಾಝಿ ಯುನಿವರ್ಸಿಟಿ ಸ್ಕೂಲ್ ಫಿಸಿಕಲ್ ಟ್ರೇನಿಂಗ್ ಎಂಡ್ ಎಜುಕೇಶನ್ ನಲ್ಲಿ ಪದವಿ ಪಡೆದಿದ್ದಾರೆ. ಸೆಲ್ಟೆಕ್ ವಿವಿಯಿಂದ ಅವರು ಕೋಚಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಅವರು ಶೂಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಅವರು ತರಬೇತಿ ಪಡೆದ ಶೂಟರ್ ಹೌದು. ಅವರು ಮಾತ್ರವಲ್ಲ ಒಲಿಂಪಿಕ್ಸ್ ನಂತಹ ಜಾಗತಿಕ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಶೂಟರ್ ಕೂಡ ತರಬೇತಿ ಪಡೆದ ಶೂಟರ್ ಆಗಿರಲೇಬೇಕು.
ಇನ್ನು ಕಣ್ಣು, ಕಿವಿಗೆ ವಿಶೇಷ ಕವಚ, ಕನ್ನಡಕ ಇಟ್ಟುಕೊಳ್ಳುವ ವಿಷಯ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ.. ಕೆಲವರಿಗೆ ಪ್ರತಿಯೊಂದು ವಿಶೇಷ ಉಪಕರಣ ಬಳಸಿಕೊಂಡೇ ಶೂಟಿಂಗ್ ಮಾಡಬೇಕು, ಇನ್ನು ಕೆಲವರಿಗೆ ಅದು ಬೇಕಾಗಿಲ್ಲ. ಅಂದ ಹಾಗೆ, ಯೂಸುಫ್ ಅವರು ಬೆಳ್ಳಿ ಗೆಲ್ಲುವಾಗ ಕಿವಿಗೆ ಇಯರ್ ಪ್ಲಗ್ ಹಾಕಿಕೊಂಡಿದ್ದರು, ಆದರೆ ಅದು ಹೊರಗೆ ಕಾಣುತ್ತಿರಲಿಲ್ಲ.
ಇನ್ನು ಜೇಬಲ್ಲಿ ಕೈ ಇಡುವ ವಿಷಯ. ಈಗ ಬಹುತೇಕ ಎಲ್ಲ ಶೂಟರ್ ಗಳು ಎಡಗೈಯನ್ನು ತಮ್ಮ ಪ್ಯಾಂಟ್ ಅಥವಾ ಟ್ರೌಸರ್ ನ ಜೇಬಿಗೆ ಹಾಕಿಕೊಂಡಿರುತ್ತಾರೆ. ಶೂಟಿಂಗ್ ಸ್ಪರ್ಧೆ ಭಾರೀ ಏಕಾಗ್ರತೆ ಬೇಡುವ ಆಟ. ಅಲ್ಲಿ ಪ್ರತೀ ರೌಂಡ್ ನಲ್ಲೂ ಒಂದಿಷ್ಟು ವಿಚಲಿತರಾಗದೆ ನಿರ್ವಹಣೆ ನೀಡಬೇಕು. ಒಂದು ತೀರಾ ಸಣ್ಣ ವ್ಯತ್ಯಾಸವಾದರೂ ಗುರಿ ತಪ್ಪುತ್ತದೆ. ಪದಕ ಕೈ ಬಿಡುತ್ತದೆ.
ವರ್ಷಗಟ್ಟಲೆ ಪರಿಶ್ರಮ, ಅಭ್ಯಾಸ ಈ ಸ್ಪರ್ಧೆಯ ಸ್ಪರ್ಧಾಳುಗಳ ಹಾಗೂ ವಿಜೇತರ ಹಿಂದಿರುತ್ತದೆ. ಅಂತಹದ್ದೇ ದಶಕಗಳ ಅಭ್ಯಾಸ ಹಾಗು ಹತ್ತು ಹಲವು ಪ್ರಶಸ್ತಿಗಳನ್ನು ಗೆದ್ದ ಬಳಿಕ ಈ ಬಾರಿ ಒಲಿಂಪಿಕ್ಸ್ ನಲ್ಲೇ ಟರ್ಕಿಯ ಕೀರ್ತಿ ಪತಾಕೆ ಹಾರಿಸಿದ್ದಾರೆ ಯೂಸುಫ್. ಆದರೆ ಅವರ ಕ್ಯಾಶುವಲ್ ಸ್ಟೈಲ್ ಮಾತ್ರ ಈಗ ಎಲ್ಲರ ಮಾತಿನ ವಿಷಯವಾಗಿಬಿಟ್ಟಿದೆ. ಅವರೀಗ ಜಾಗತಿಕ ಸೆಲೆಬ್ರಿಟಿಯಾಗಿಬಿಟ್ಟಿದ್ದಾರೆ.
ಅಂದ ಹಾಗೆ ಯೂಸುಫ್ ಅವರ ಈ ಕ್ಯಾಶುವಲ್ ಸ್ಟೈಲ್ ಮಿಂಚಿ ಎಲ್ಲೆಡೆ ಸುದ್ದಿಯಾಗುತ್ತಿರುವಾಗ ಸುದ್ದಿಯಾಗದೆ ಉಳಿದಿರುವವರು ಸೇವಾಲ್ ಇಲೈದ ತರ್ಹನ್. ಇವರಿಬ್ಬರೂ ಒಟ್ಟಿಗೆ ಮಿಶ್ರ ಸ್ಪರ್ಧೆಯಲ್ಲಿ ಈ ಬೆಳ್ಳಿ ಗೆದ್ದಿದ್ದಾರೆ.