2ನೇ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಆಫ್ರಿಕಾ ರೋಚಕ ಜಯ
PC: x.com/Jamesnisam5363
ಹೊಸದಿಲ್ಲಿ: ಮಧ್ಯಮ ಕ್ರಮಾಂಕದ ಆಟಗಾರ ಟ್ರಿಸ್ಟನ್ ಸ್ಟಬ್ಸ್ ಏಕಾಂಗಿ ಸಾಹಸದಲ್ಲಿ ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ತಂಡ ಪ್ರವಾಸಿ ಭಾರತದ ವಿರುದ್ಧ 3 ವಿಕೆಟ್ ಗಳ ರೋಚಕ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಸೆಂಟ್ ಜಾರ್ಜ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಒವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 124 ರನ್ ಗಳಿಸಿತು. ಆಫ್ರಿಕಾ ಬೌಲರ್ ಗಳ ಸಂಘಟಿತ ದಾಳಿಗೆ ಕುಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಮಾರ್ಕೋ ಜಾನ್ಸನ್ ಮೊದಲ ಓವರ್ ನಲ್ಲೇ ಸಂಜು ಸ್ಯಾಮ್ಸನ್ (0) ವಿಕೆಟ್ ಕಿತ್ತರೆ, ಮರು ಓವರ್ ನಲ್ಲಿ ಅಭಿಷೇಕ್ ಶರ್ಮಾ (4) ಅವರನ್ನು ಗೆರಾಲ್ಡ್ ಗೊಯೆಟ್ಸಿ ಪೆವಿಲಿಯನ್ ಗೆ ಕಳುಹಿಸಿದರು. ನಾಯಕ ಸೂರ್ಯಕುಮಾರ್ ಯಾದವ್ (4) ಅವರು ಸಿಮೆಲನ್ ಅವರ ಎಲ್ಬಿಡಬ್ಲ್ಯು ಬಲೆಗೆ ಬೀಳುವ ಮೂಲಕ ಭಾರತ 15 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು.
ಮಧ್ಯಮ ಕ್ರಮಾಂಕದ ಆಟಗಾರರಾದ ತಿಲಕ್ ವರ್ಮಾ (20 ಎಸೆತಗಳಲ್ಲಿ 20), ಅಕ್ಷರ್ ಪಟೇಲ್ (21 ಎಸೆತಗಳಲ್ಲಿ 27) ಮತ್ತು ಹಾರ್ದಿಕ್ ಪಾಂಡ್ಯ (45 ಎಸೆತಗಳಲ್ಲಿ 39 ನಾಟೌಟ್) ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರೂ, ವೇಗದ ರನ್ ಗಳಿಕೆಗೆ ಕಡಿವಾಣ ಬಿದ್ದು, ಅಲ್ಪಮೊತ್ತಕ್ಕೆ ಕುಸಿಯಿತು.
ಅತಿಥೇಯ ತಂಡ ಕೂಡಾ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ಹಲವು ಆತಂಕದ ಕ್ಷಣಗಳನ್ನು ಎದುರಿಸಿತು. 15.4 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿ ತಂಡ ಸಂಕಷ್ಟಕ್ಕೆ ಸಿಲುಕಿದಾಗ ತ್ರಿಸ್ತನ್ ಸ್ಟಬ್ಸ್ (41 ಎಸೆತಗಳಲ್ಲಿ 47 ನಾಟೌಟ್) ಮತ್ತು ಗೆರಾಲ್ಡ್ ಗೊಯೆಟ್ಸ್ (9 ಎಸೆತಗಳಲ್ಲಿ 19) ಭಾರತದಿಂದ ಗೆಲುವು ಕಸಿದುಕೊಂಡರು. ಕೊನೆಯ 20 ಎಸೆತಗಳಲ್ಲಿ 42 ರನ್ ಗಳಿಸಿದ ಆಫ್ರಿಕಾ 19 ಓವರ್ ಗಳಲ್ಲೇ ಗೆಲುವಿನ ಗುರಿ ತಲುಪಿತು. ಸ್ಟಬ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.