ಸ್ವದೇಶಕ್ಕೆ ವಾಪಸಾದ ವಿಶ್ವಕಪ್ ವಿಜೇತ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಅಬ್ಬರವಿಲ್ಲದ ಸ್ವಾಗತ!
Photo- PTI
ಮೆಲ್ಬೋರ್ನ್: ದಾಖಲೆಯ 6ನೇ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಜಯಿಸುವ ಮೂಲಕ ತನ್ನ ತಂಡ ವಿಶೇಷ ಪರಂಪರೆಯನ್ನು ಆರಂಭಿಸಿದೆ ಎಂದು ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದರು. ಆದರೆ, ವಿಶ್ವಕಪ್ ವಿಜೇತ ತಂಡವು ಬುಧವಾರ ಭಾರತದಿಂದ ಸ್ವದೇಶಕ್ಕೆ ಮರಳಿದಾಗ ಅಬ್ಬರವಿಲ್ಲದ ಸ್ವಾಗತ ನೀಡಲಾಗಿದೆ.
ಆಸ್ಟ್ರೇಲಿಯ ತಂಡ ರವಿವಾರ ಅಹ್ಮದಾಬಾದ್ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ನಲ್ಲಿ ಆತಿಥೇಯ ಭಾರತವನ್ನು ಆರು ವಿಕೆಟ್ಗಳಿಂದ ಮಣಿಸಿ ಆಘಾತ ನೀಡಿತ್ತು. ಈ ವರ್ಷದ ಆರಂಭದಲ್ಲಿ ಭಾರತವನ್ನು ಮಣಿಸಿ ಆಸ್ಟ್ರೇಲಿಯವು ಮೊದಲ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಕಮಿನ್ಸ್ ಹಾಗೂ ಸಹ ಆಟಗಾರರು ಸಿಡ್ನಿಯಲ್ಲಿ ಬಂದಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಮಾಧ್ಯಮದವರು ಉಪಸ್ಥಿತರಿದ್ದರು. ಕ್ರಿಕೆಟ್ ಅಭಿಮಾನಿಗಳ ಸುಳಿವೇ ಇರಲಿಲ್ಲ. ಅಬ್ಬರವಿಲ್ಲದ ಸ್ವಾಗತ ಪಡೆದ ಕಮಿನ್ಸ್ ಅವರು ತನ್ನ ತಂಡದ ಗಮನಾರ್ಹ ಸಾಧನೆಯ ಬಗ್ಗೆ ಮತ್ತೊಮ್ಮೆ ಹೆಮ್ಮೆ ಹಾಗೂ ತೃಪ್ತಿಯನ್ನು ವ್ಯಕ್ತಪಡಿಸಿದರು.
ಆಟಗಾರರು ತಮ್ಮದೇ ಆದ ಪರಂಪರೆಯನ್ನು ಸೃಷ್ಟಿಸಿದ್ದಾರೆನ್ನುವುದು ನನ್ನ ಭಾವನೆ. ವಿಶ್ವಕಪ್ನಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕೇವಲ ಒಂದು ಅವಕಾಶ ಪಡೆಯುತ್ತೇವೆ. ವಿಶೇಷವಾಗಿ ಭಾರತದಂತಹ ತಂಡದ ವಿರುದ್ಧ ಆಡುವುದು ಕಷ್ಟಕರ. ಟೂರ್ನಿಯ ಆರಂಭದಲ್ಲಿ ಸತತ ಎರಡು ಸೋಲಿನಿಂದ ಉಂಟಾದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ತಂಡವು ತನ್ನಲ್ಲಿ ಅಚಲವಾದ ವಿಸ್ವಾಸವನ್ನು ಉಳಿಸಿಕೊಂಡಿದೆ. ನಾವು ಆರಂಭದಿಂದಲೂ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ನಾವು ಒಮ್ಮೆ ಕ್ಲಿಕ್ ಆದರೆ ಯಾರನ್ನು ಬೇಕಾದರೂ ಸೋಲಿಸುತ್ತೇವೆಂದು ತಿಳಿದಿದ್ದೆವು. ಅದು ನಿಜವೆಂದು ಸಾಬೀತಾಯಿತು ಎಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಕಮಿನ್ಸ್ ತಿಳಿಸಿದರು.