ಅಡಿಲೇಡ್ ಟೆಸ್ಟ್ : ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ಬ್ಯಾಟಿಂಗ್?
ರೋಹಿತ್ ಶರ್ಮಾ | PC : PTI
ಹೊಸದಿಲ್ಲಿ : ನಾಯಕ ರೋಹಿತ್ ಶರ್ಮಾ ಮುಂಬರುವ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವ ಬದಲು ಭಾರತ ಕ್ರಿಕೆಟ್ ತಂಡದ ಪರ ಮಧ್ಯಮ ಸರದಿಯಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.
ಡಿಸೆಂಬರ್ 6ರಿಂದ ಆಸ್ಟ್ರೇಲಿಯ ತಂಡದ ವಿರುದ್ಧ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ ಎಂದು ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ರವಿವಾರ ಸಂದೇಶ ರವಾನಿಸಿದೆ.
ವೈಯಕ್ತಿಕ ಕಾರಣದಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದ ರೋಹಿತ್ ಮೇಲೆ ಎಲ್ಲರ ಚಿತ್ತ ಹರಿದಿದೆ. 37ರ ಹರೆಯದ ರೋಹಿತ್ ಅವರು ಅಡಿಲೇಡ್ನಲ್ಲಿ ನಡೆಯಲಿರುವ ಪಿಂಕ್ಬಾಲ್ ಟೆಸ್ಟ್ಗಿಂತ ಮೊದಲು ಆಸ್ಟ್ರೇಲಿಯದ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿದೆ.
ಕ್ಯಾನ್ಬೆರಾದಲ್ಲಿ ರವಿವಾರ ನಡೆದ ಆಸ್ಟ್ರೇಲಿಯದ ಪ್ರಧಾನಮಂತ್ರಿ ಇಲೆವೆನ್ ವಿರುದ್ಧ ಪಂದ್ಯದಲ್ಲಿ ರೋಹಿತ್ ಅವರು ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಆರಂಭಿಸಲಿಲ್ಲ. ಅಚ್ಚರಿಯ ಹೆಜ್ಜೆಯೊಂದರಲ್ಲಿ ರವಿವಾರ ಪಿಂಕ್ಬಾಲ್ ಅಭ್ಯಾಸ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್.ರಾಹುಲ್ ಅವರು ಆರಂಭಿಕ ಜೋಡಿಯಾಗಿ ಕಣಕ್ಕಿಳಿದಿದ್ದರು.
ಹಗಲು-ರಾತ್ರಿ ಪಂದ್ಯವು ಬ್ಯಾಟರ್ಗಳಿಗೆ ಹೆಚ್ಚು ಸವಾಲಿನದ್ದಾಗಿದೆ ಎಂಬುದನ್ನು ಪರಿಗಣಿಸಿ ಜೈಸ್ವಾಲ್-ರಾಹುಲ್ರನ್ನು ಆರಂಭಿಕ ಆಟಗಾರರನ್ನಾಗಿ ಕಣಕ್ಕಿಳಿಸಲಾಗಿದೆ. ಟೀಮ್ ಮ್ಯಾನೇಜ್ಮೆಂಟ್ ಹಗಲು-ರಾತ್ರಿ ನಡೆಯಲಿರುವ ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಸೀಮಿತವಾಗಿ ರೋಹಿತ್ರನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಬಹುದು.
ಟಾಸ್ ವೇಳೆ ಟೀಮ್ ಶೀಟ್ನಲ್ಲಿ ರೋಹಿತ್ ಅವರ ಹೆಸರು ವಿರಾಟ್ ಕೊಹ್ಲಿಯವರ ನಂತರ 5ನೇ ಕ್ರಮಾಂಕದಲ್ಲಿತ್ತು.
ಪರ್ತ್ನಲ್ಲಿ ನಡೆದಿದ್ದ ಆರಂಭಿಕ ಟೆಸ್ಟ್ ಪಂದ್ಯವನ್ನು ಭಾರತ ತಂಡವು 295 ರನ್ಗಳಿಂದ ಜಯ ಸಾಧಿಸಿದ್ದು, ಸರಣಿಯಲ್ಲಿ ಸದ್ಯ 1-0 ಮುನ್ನಡೆಯಲ್ಲಿದೆ. ಜೈಸ್ವಾಲ್-ರಾಹುಲ್ ಜೋಡಿ ಅಗ್ರ ಸರದಿಯಲ್ಲಿ ಗಮನ ಸೆಳೆದಿದ್ದರು. ಎರಡನೇ ಇನಿಂಗ್ಸ್ನಲ್ಲಿ ಮೊದಲ ವಿಕೆಟ್ಗೆ 201 ರನ್ ಜೊತೆಯಾಟ ನಡೆಸಿರುವ ರಾಹುಲ್-ಜೈಸ್ವಾಲ್ ಭಾರತ ತಂಡವು ಎದುರಾಳಿ ತಂಡದ ಗೆಲುವಿಗೆ 534 ರನ್ ಗುರಿ ನೀಡಲು ನೆರವಾಗಿದ್ದರು.
ರೋಹಿತ್ ಶರ್ಮಾ ಈ ಹಿಂದೆ ಮಧ್ಯಮ ಸರದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 2013ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ತನ್ನ ಚೊಚ್ಚಲ ಪಂದ್ಯ ಆಡಿದ ನಂತರ ರೋಹಿತ್ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ಟೆಸ್ಟ್ ಸರಣಿಯ ವೇಳೆ ಮೊದಲ ಬಾರಿ ಅಗ್ರ ಸರದಿಯಲ್ಲಿ ಬ್ಯಾಟಿಂಗ್ ಮಾಡಿದ್ದರು.