ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾದ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್
ರಶೀದ್ ಖಾನ್ Photo: X
ಕಾಬೂಲ್ : ಖ್ಯಾತ ಕ್ರಿಕೆಟಿಗ ರಶೀದ್ ಖಾನ್ ಅವರು ಬ್ರಿಟನ್ನಲ್ಲಿ ಸಣ್ಣ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಶೀಘ್ರವೇ ಸಂಪೂರ್ಣ ಗುಣಮುಖರಾಗುವ ನಿರೀಕ್ಷೆ ಇದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಡಿಸೆಂಬರ್ 7ರಿಂದ ಆರಂಭವಾಗಲಿರುವ ಬಿಗ್ ಬ್ಯಾಶ್ ಲೀಗ್ನಿಂದ ಸ್ಪಿನ್ನರ್ ರಶೀದ್ ಖಾನ್ ಗೈರು ಹಾಜರಾಗಲಿದ್ದಾರೆ.
ಭಾರತದಲ್ಲಿ ನಡೆದಿರುವ ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನದಂತಹ ತಂಡಗಳ ವಿರುದ್ಧ ಅಫ್ಘಾನ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ರಶೀದ್ ಅವರು ಬ್ರಿಟನ್ನ ಖ್ಯಾತ ಶಸ್ತ್ರಚಿಕಿತ್ಸಕರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ)ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಅಫ್ಘಾನಿಸ್ತಾನದ ಕ್ರಿಕೆಟ್ ಸೆನ್ಸೇಶನ್ ರಶೀದ್ ಖಾನ್ ಬ್ರಿಟನ್ನಲ್ಲಿ ಹೆಸರಾಂತ ಶಸ್ತ್ರಚಿಕಿತ್ಸಕ ಡಾ. ಜೇಮ್ಸ್ ಅಲಿಬೋನ್ ಅವರ ಪರಿಣತಿಯೊಂದಿಗೆ ಸಣ್ಣ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಸ್ವಲ್ಪ ಸಮಯದ ತನಕ ವಿಶ್ರಾಂತಿ ಪಡೆಯಲಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಎಕ್ಸ್ನಲ್ಲಿ ಎಸಿಬಿ ಹೇಳಿಕೆ ತಿಳಿಸಿದೆ.
ರಶೀದ್ ಶೀಘ್ರದಲ್ಲೇ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ರಶೀದ್ ಪ್ರತಿನಿಧಿಸುವ ಬಿಬಿಎಲ್ ತಂಡ ಅಡಿಲೇಡ್ ಸ್ಟ್ರೈಕರ್ಸ್, ಗುರುವಾರ ಘೋಷಿಸಿತ್ತು. 2017ರಿಂದ ರಶೀದ್ ಅವರು ಸ್ಟೈಕರ್ಸ್ ತಂಡದ ಸದಸ್ಯರಾಗಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಆಸ್ಟ್ರೇಲಿಯ ರದ್ದುಗೊಳಿಸಿರುವುದನ್ನು ಪ್ರತಿಭಟಿಸಿ ರಶೀದ್ ಈ ಹಿಂದೆ ಬಿಬಿಎಲ್ನಿಂದ ಹೊರಗುಳಿಯುವುದಾಗಿ ಪ್ರತಿಜ್ಞೆ ಮಾಡಿದ್ದರು. ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿ ರಶೀದ್ ಅಫ್ಘಾನಿಸ್ತಾನದ ಅಭಿಯಾನದ ಭಾಗವಾಗಿದ್ದರು.