ಐಸಿಸಿ ವರ್ಷದ ಏಕದಿನ ಪುರುಷ ಕ್ರಿಕೆಟಿಗನಾಗಿ ಅಫ್ಘಾನಿಸ್ತಾನದ ಅಝ್ಮಾತುಲ್ಲಾ ಉಮರ್ಝಾಯಿ

ಅಝ್ಮಾತುಲ್ಲಾ ಉಮರ್ಝಾಯಿ | PC : NDTV
ದುಬೈ: ಅಫ್ಘಾನಿಸ್ತಾನದ ಆಲ್ರೌಂಡರ್ ಅಝ್ಮಾತುಲ್ಲಾ ಉಮರ್ಝಾಯಿ ಅವರನ್ನು ಸೋಮವಾರ 2024ರ ಸಾಲಿನ ಐಸಿಸಿ ಪುರುಷರ ಏಕದಿನ ಕ್ರಿಕೆಟಿಗನಾಗಿ ಹೆಸರಿಸಲಾಗಿದೆ.
24 ವರ್ಷದ ಚತುರ ವೇಗಿ ಹಾಗೂ ಪ್ರಭಾವಿ ಬ್ಯಾಟರ್ ಉಮರ್ಝಾಯಿ, ತನ್ನ 2023ರ ಆಕರ್ಷಕ ನಿರ್ವಹಣೆಯನ್ನು 2024ರಲ್ಲೂ ಮುಂದುವರಿಸಿ ಕ್ರಿಕೆಟ್ ಜಗತ್ತಿನಲ್ಲಿ ತನಗೊಂದು ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಅವರು 2024ರಲ್ಲಿ ಶ್ರೇಷ್ಠ ಏಕದಿನ ಕ್ರಿಕೆಟಿಗರ ಪೈಕಿ ಒಬ್ಬರಾಗಿ ಮೂಡಿಬಂದಿದ್ದಾರೆ. ಅವರು ಅಂತರ್ರಾಷ್ಟ್ರೀಯ ಟಿ20 ಕ್ರಿಕೆಟ್ ಮತ್ತು ಲೀಗ್ ಕ್ರಿಕೆಟ್ನಲ್ಲೂ ಕಳೆದ ವರ್ಷ ಪ್ರಭಾವಿ ನಿರ್ವಹಣೆಯನ್ನು ನೀಡಿದ್ದಾರಾದರೂ, ಅವರು ತನ್ನ ಪ್ರಾಬಲ್ಯವನ್ನು ಸಾಧಿಸಿದ್ದು ಏಕದಿನ ಕ್ರಿಕೆಟ್ನಲ್ಲಿ.
ಅವರು ಕಳೆದ ವರ್ಷ ಏಕದಿನ ಕ್ರಿಕೆಟ್ನಲ್ಲಿ ತನ್ನ ರಾಷ್ಟ್ರೀಯ ತಂಡದ ಎರಡನೇ ಗರಿಷ್ಠ ರನ್ ಗಳಿಕೆದಾರನಾಗಿ ಹೊರಹೊಮ್ಮಿದ್ದಾರೆ. ಮೊದಲ ಸ್ಥಾನದಲ್ಲಿ ರಹ್ಮಾನುಲ್ಲಾ ಗುರ್ಬಾಝ್ ಇದ್ದಾರೆ. ಅದೂ ಅಲ್ಲದೆ, ಎ.ಎಮ್.ಘಝನ್ಫಾರ್ ಬಳಿಕ ಆ ದೇಶದ ಎರಡನೇ ಗರಿಷ್ಠ ವಿಕೆಟ್ ಗಳಿಕೆದಾರನೂ ಅವರಾಗಿದ್ದಾರೆ. 2024ರಲ್ಲಿ ಅಫ್ಘಾನಿಸ್ತಾನ ತಂಡವು ಐದು ಏಕದಿನ ಸರಣಿಗಳ ಪೈಕಿ ನಾಲ್ಕನ್ನು ಗೆದ್ದಿದೆ. ಐರ್ಲ್ಯಾಂಡ್, ದಕ್ಷಿಣ ಆಫ್ರಿಕ, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗಳನ್ನು ಅಫ್ಘಾನಿಸ್ತಾನ ಗೆದ್ದಿದೆ.
ಉಮರ್ಝಾಯಿ ಕಳೆದ ವರ್ಷ 14 ಏಕದಿನ ಪಂದ್ಯಗಳಲ್ಲಿ ಆಡಿ 417 ರನ್ಗಳನ್ನು ಗಳಿಸಿದ್ದಾರೆ ಮತ್ತು 17 ವಿಕೆಟ್ಗಳನ್ನು ಉರುಳಿಸಿದ್ದಾರೆ. ಅವರು 52.12ರ ಸರಾಸರಿಯಲ್ಲಿ ರನ್ಗಳನ್ನು ಗಳಿಸಿದರೆ, 20.47ರ ಸರಾಸರಿಯಲ್ಲಿ ವಿಕೆಟ್ಗಳನ್ನು ಉರುಳಿಸಿದ್ದಾರೆ. ಅವರು ದಕ್ಷಿಣ ಆಫ್ರಿಕ ವಿರುದ್ಧ 50 ಎಸೆತಗಳಲ್ಲಿ 86 ರನ್ಗಳನ್ನು ಸಿಡಿಸಿದ್ದರು.