ಅಫ್ಘಾನಿಸ್ತಾನದ ವೇಗದ ಬೌಲರ್ ಶಾಪೂರ್ ಝದ್ರಾನ್ ಕ್ರಿಕೆಟ್ನಿಂದ ನಿವೃತ್ತಿ

ಶಾಪೂರ್ ಝದ್ರಾನ್ | PC : PTI
ಕಾಬೂಲ್: ಅಫ್ಘಾನಿಸ್ತಾನದ ಹಿರಿಯ ವೇಗದ ಬೌಲರ್ ಶಾಪೂರ್ ಝದ್ರಾನ್ ಅಂತರ್ರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದಾರೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ದಶಕಕ್ಕೂ ಹೆಚ್ಚು ಸಮಯ ಪ್ರತಿನಿಧಿಸಿದ್ದ ಝದ್ರಾನ್ ತನ್ನ ತಂಡವು ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಪ್ರಗತಿ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಅಫ್ಘಾನಿಸ್ತಾನ ಕ್ರಿಕೆಟ್ಗೆ ಕಾಲಿಟ್ಟಾಗ ಪ್ರಮುಖ ಆಟಗಾರನಾಗಿದ್ದ ಎಡಗೈ ವೇಗದ ಬೌಲರ್ ಝದ್ರಾನ್ ಐಸಿಸಿ ಅಯೋಜಿತ 3 ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ್ದರು. 2015ರಲ್ಲಿ ಡುನೆಡಿನ್ನಲ್ಲಿ ನಡೆದಿದ್ದ ಸ್ಕಾಟ್ಲ್ಯಾಂಡ್ ವಿರುದ್ಧದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ ಗೆಲುವಿನ ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದರು. ಆಗ ಅಫ್ಘಾನ್ ತಂಡವು ವಿಶ್ವಕಪ್ ಚರಿತ್ರೆಯಲ್ಲಿ ಮೊತ್ತ ಮೊದಲ ಗೆಲುವು ಪಡೆದಿತ್ತು.
37ರ ಹರೆಯದ ಝದ್ರಾನ್ ಫೇಸ್ಬುಕ್ ಮೂಲಕ ತನ್ನ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು. ಝದ್ರಾನ್ 2020ರಲ್ಲಿ ಗ್ರೇಟರ್ ನೊಯ್ಡಾದಲ್ಲಿ ಐರ್ಲ್ಯಾಂಡ್ ವಿರುದ್ಧ ತನ್ನ ಕೊನೆಯ ಅಂತರ್ರಾಷ್ಟ್ರೀಯ ಪಂದ್ಯ ಆಡಿದ್ದರು.
ಝದ್ರಾನ್ ತನ್ನ ಅಂತರ್ರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ 80 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಏಕದಿನ ಕ್ರಿಕೆಟ್ನಲ್ಲಿ 43 ವಿಕೆಟ್ಗಳು ಹಾಗೂ ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ 37 ವಿಕೆಟ್ಗಳನ್ನು ಪಡೆದಿದ್ದಾರೆ.