ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್ಗೆ ನಿವೃತ್ತಿ: ಅಫ್ಘಾನಿಸ್ತಾನದ ಬೌಲರ್ ನವೀನ್ ಉಲ್-ಹಕ್ ಘೋಷಣೆ
ನವೀನ್ ಉಲ್-ಹಕ್| Photo: instagram.com
ಹೊಸದಿಲ್ಲಿ: ಅಕ್ಟೋಬರ್ 5ರಿಂದ ಪ್ರಾರಂಭವಾಗಿ ನವೆಂಬರ್ 19ಕ್ಕೆ ಮುಕ್ತಾಯಗೊಳ್ಳಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ನಂತರ ಅಫ್ಘಾನಿಸ್ತಾನದ ತಾರಾ ಬೌಲರ್ ನವೀನ್ ಉಲ್-ಹಕ್ ನಿವೃತ್ತರಾಗಲಿದ್ದಾರೆ ಎಂದು ವರದಿಯಾಗಿದೆ. ಮೂರನೆಯ ಬಾರಿಗೆ ವಿಶ್ವಕಪ್ ಆಡುತ್ತಿರುವ ಅಫ್ಘಾನಿಸ್ತಾನದ 15 ಮಂದಿ ಕ್ರಿಕೆಟ್ ಸದಸ್ಯರ ಪೈಕಿ ನವೀನ್ ಉಲ್-ಹಕ್ ಕೂಡಾ ಒಬ್ಬರಾಗಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ನವೀನ್ ಉಲ್-ಹಕ್, "ನನ್ನ ದೇಶವನ್ನು ಪ್ರತಿನಿಧಿಸುವುದು ನನ್ನ ಪಾಲಿಗೆ ಅಕ್ಷರಶಃ ಗೌರವವಾಗಿದ್ದು, ವಿಶ್ವಕಪ್ ನಂತರ ಏಕ ದಿನ ಕ್ರಿಕೆಟ್ ಮಾದರಿಯಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಹಾಗೂ ಟಿ-20 ಮಾದರಿಯ ಕ್ರಿಕೆಟ್ನಲ್ಲಿ ನೀಲಿ ಜೆರ್ಸಿ ತೊಟ್ಟು ಮುಂದುವರಿಯಲಿದ್ದೇನೆ. ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ, ನನ್ನ ವೃತ್ತಿ ಜೀವನವನ್ನು ದೀರ್ಘಕಾಲ ಮುಂದುವರಿಸಲು ಈ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು. ನಾನು @afghanistancricketboardಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ನನ್ನ ಎಲ್ಲ ಅಭಿಮಾನಿಗಳ ಬೆಂಬಲ ಹಾಗೂ ನಿಷ್ಕಲ್ಮಶ ಪ್ರೀತಿಗೂ ಧನ್ಯವಾದ ಅರ್ಪಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ನವೀನ್ ಉಲ್-ಹಕ್ರ ಈ ನಿರ್ಧಾರದಿಂದ ಅಫ್ಘಾನಿಸ್ತಾನ ತಂಡವು ಆಶ್ಚರ್ಯಕ್ಕೀಡಾಗಿದೆ. ಅವರು ಜನವರಿ 2021ರಿಂದ ಅಫ್ಘಾನಿಸ್ತಾನ ತಂಡದ ಪರವಾಗಿ ಏಕದಿನ ಪಂದ್ಯಗಳನ್ನಾಡುತ್ತಿದ್ದು, ಸುಮಾರು ಎರಡೂವರೆ ವರ್ಷಗಳ ನಂತರ ಏಕದಿನ ಮಾದರಿಯ ಕ್ರಿಕೆಟ್ಗೆ ಮರಳಿದ್ದರು. ಅವರು ಈವರೆಗೆ ಏಳು ಏಕದಿನ ಪಂದ್ಯಗಳನ್ನಾಡಿದ್ದು, 14 ವಿಕೆಟ್ಗಳನ್ನು ಕಬಳಿಸಿದ್ದಾರೆ.
ನವೀನ್ ಉಲ್-ಹಕ್ ಈವರೆಗೆ 27 ಟಿ-20 ಪಂದ್ಯಗಳನ್ನಾಡಿದ್ದು, 34 ವಿಕೆಟ್ಗಳನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ. ಈ ಮಾದರಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅವರು, ತಮ್ಮ ವೃತ್ತಿ ಜೀವನವನ್ನು ಇದೇ ಮಾದರಿಯಲ್ಲಿ ಮುಂದುವರಿಸುವುದಾಗಿ ಪುನರುಚ್ಚರಿಸಿದ್ದಾರೆ.