ಪಿಎನ್ಐ ತಂಡವನ್ನು ಸೋಲಿಸಿ ಸೂಪರ್-8ಕ್ಕೆ ಲಗ್ಗೆ ಇಟ್ಟ ಅಫ್ಘಾನಿಸ್ತಾನ
ಪಂದ್ಯಾವಳಿಯಿಂದ ಹೊರಬಿದ್ದ ನ್ಯೂಝಿಲ್ಯಾಂಡ್
PC : NDTV
ಟರೌಬ, : ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಪಪುವಾ ನ್ಯೂಗಿನಿ ತಂಡವನ್ನು 7 ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿ ಸೂಪರ್-8 ಹಂತಕ್ಕೆ ತೇರ್ಗಡೆಯಾಗಿದೆ.
ಈ ಫಲಿತಾಂಶದಿಂದಾಗಿ ನ್ಯೂಝಿಲ್ಯಾಂಡ್ ತಂಡ ಪ್ರಸಕ್ತ ಟಿ-20 ವಿಶ್ವಪಪ್ ಟೂರ್ನಮೆಂಟ್ನಿಂದ ಹೊರಬಿದ್ದಿದೆ.
ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ 2014ರ ನಂತರ ಇದೇ ಮೊದಲ ಬಾರಿ ಪುರುಷರ ವಿಶ್ವಕಪ್(ಏಕದಿನ ಅಥವಾ ಟಿ-20)ಟೂರ್ನಿಯ ಸೆಮಿ ಫೈನಲ್ ಹಂತಕ್ಕಿಂತ ಮೊದಲೇ ಸ್ಪರ್ಧೆಯಿಂದ ನಿರ್ಗಮಿಸಿದೆ.
ಆರು ಅಂಕ ಹಾಗೂ 4.230 ನೆಟ್ರನ್ರೇಟ್ನೊಂದಿಗೆ ಅಫ್ಘಾನಿಸ್ತಾನ ತಂಡ ಸಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.
ವೇಗದ ಬೌಲರ್ಗಳಾದ ಫಝಲ್ಹಕ್ ಫಾರೂಕಿ (3-16)ಹಾಗೂ ನವೀನ್ ಉಲ್ ಹಕ್(2-4) ಹೊಸ ಚೆಂಡಿನಲ್ಲಿ ಮಾರಕ ಬೌಲಿಂಗ್ ಸಂಘಟಿಸಿ ಪವರ್ ಪ್ಲೇ ಮುಗಿಯುವುದರೊಳಗೆ ಪಿಎನ್ಜಿ ತಂಡದ ಐದು ವಿಕೆಟ್ಗಳನ್ನು ಉರುಳಿಸಿದರು. ಆರಂಭಿಕ ಬ್ಯಾಟರ್ ಟೂನಿ ಉರಾ(11ರನ್) ವಿಕೆಟನ್ನು ಉರುಳಿಸಿದ ನವೀನ್ ಉಲ ಹಕ್ 50ನೇ ಟಿ-20 ವಿಕೆಟನ್ನು ಉರುಳಿಸಿದರು.
ಅಫ್ಘಾನಿಸ್ತಾನದ ಉತ್ತಮ ಫೀಲ್ಡಿಂಗ್ಗೆ ನಾಲ್ವರು ಆಟಗಾರರು ರನೌಟಾಗಿದ್ದು, ಅಂತಿಮವಾಗಿ ಪಿಎನ್ಜಿ 19.5 ಓವರ್ಗಳಲ್ಲಿ ಕೇವಲ 95 ರನ್ ಗಳಿಸಿ ಆಲೌಟಾಯಿತು. ಕಿಪ್ಲಿನ್ ಡೊರಿಗ(27 ರನ್, 32 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು.
ಔಟಾಗದೆ 49 ರನ್(36 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿದ ಗುಲ್ಬದ್ದೀನ್ ನೈಬ್ ಅಫ್ಘಾನಿಸ್ತಾನ ತಂಡ ಇನ್ನೂ 29 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಲು ನೆರವಾದರು.
96 ರನ್ ಗುರಿ ಅಫ್ಘಾನಿಸ್ತಾನಕ್ಕೆ ಚಿಂತೆಗೀಡು ಮಾಡಿಲ್ಲ. ಮೊದಲೆರಡು ಲೀಗ್ ಪಂದ್ಯಗಳಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹೀಂ ಝದ್ರಾನ್ ಮೊದಲ ವಿಕೆಟ್ಗೆ ಶತಕದ ಜೊತೆಯಾಟ ನಡೆಸಿದ್ದರು. ಈ ಎರಡು ಇನಿಂಗ್ಸ್ಗಳಲ್ಲಿ ಗುರ್ಬಾಝ್ ಅರ್ಧಶತಕ ಗಳಿಸಿದ್ದರು. ಹೀಗಾಗಿ ಮಧ್ಯಮ ಸರದಿಯ ಬ್ಯಾಟರ್ಗಳು ಹೆಚ್ಚು ಪರೀಕ್ಷೆಗೆ ಒಳಗಾಗಿಲ್ಲ.
ಇಂದಿನ ಪಂದ್ಯದಲ್ಲಿ ಗುರ್ಬಾಝ್(11 ರನ್)ಹಾಗೂ ಇಬ್ರಾಹೀಂ ಝದ್ರಾನ್(0)ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. 22 ರನ್ ಸೇರುವಷ್ಟರಲ್ಲಿ ಈ ಇಬ್ಬರು ಔಟಾಗಿದ್ದಾರೆ. 4ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 30 ಎಸೆತಗಳಲ್ಲಿ 46 ರನ್ ಸೇರಿಸಿದ ನೈಬ್ ಹಾಗೂ ಮುಹಮ್ಮದ್ ನಬಿ(ಔಟಾಗದೆ 16)15.1 ಓವರ್ಗಳಲ್ಲಿ ಅಫ್ಘಾನಿಸ್ತಾನಕ್ಕೆ ಗೆಲುವು ತಂದುಕೊಟ್ಟರು.
4 ಓವರ್ಗಳಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್ಗಳನ್ನು ಕಬಳಿಸಿದ ಫಝಲ್ಹಕ್ ಫಾರೂಕಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಪಪುವಾ ನ್ಯೂಗಿನಿ: 19.5 ಓವರ್ಗಳಲ್ಲಿ 95/10
(ಕಿಪ್ಲಿನ್ ಡೊರಿಗಾ 27,ಫಝಲ್ಹಕ್ ಫಾರೂಕಿ 3-16, ನವೀನ್ ಉಲ್ ಹಕ್ 2-4)
ಅಫ್ಘಾನಿಸ್ತಾನ: 15.1 ಓವರ್ಗಳಲ್ಲಿ 101/3
(ಗುಲ್ಬದ್ದೀನ್ ನೈಬ್ ಔಟಾಗದೆ 49, ಮುಹಮ್ಮದ್ ನಬಿ ಔಟಾಗದೆ 16, ಸೆಮೊ ಕಮಿಯಾ 1-16)