ಶ್ರೇಯಸ್ ಅಯ್ಯರ್ ಐಪಿಎಲ್ ಪೂರ್ವ ಶಿಬಿರದಲ್ಲಿ ಭಾಗವಹಿಸಿದ್ದರಿಂದ ಆಕ್ರೋಶಗೊಂಡಿದ್ದ ಅಗರ್ಕರ್: ವರದಿ

ಶ್ರೇಯಸ್ ಅಯ್ಯರ್ , ಅಗರ್ಕರ್ | Photo: X
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕೇಂದ್ರೀಯ ಗುತ್ತಿಗೆಯಿಂದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ರನ್ನು ಕೈಬಿಟ್ಟಿರುವುದು ಒಂದು ವಾರದಿಂದ ಸುದ್ದಿ ಮಾಡುತ್ತಿದೆ. ಈ ಇಬ್ಬರು ಆಟಗಾರರು ಒಂದು ವರ್ಷದಿಂದ ಬಿಸಿಸಿಐಯ ಯೋಜನೆಗಳ ಭಾಗವಾಗಿದ್ದರು. ಪ್ರಮುಖ ಪಂದ್ಯಾವಳಿಗಳಲ್ಲಿ ಅವರು ಭಾರತದ ಪರವಾಗಿ ಆಡಿದ್ದರು. ತೀರಾ ಇತ್ತೀಚಿನವರೆಗೂ ಅವರು ಭಾರತೀಯ ತಂಡದಲ್ಲಿ ಆಡಿದ್ದರು.
ದಕ್ಷಿಣ ಆಫ್ರಿಕ ಪ್ರವಾಸಗೈದ ಭಾರತೀಯ ತಂಡದಲ್ಲಿ ಇಶಾನ್ ಕಿಶನ್ ಇದ್ದರು. ಬಳಿಕ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಗಳಲ್ಲಿ ಶ್ರೇಯಸ್ ಅಯ್ಯರ್ ಆಡಿದ್ದರು. ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ದೇಶಿ ಕ್ರಿಕೆಟ್ನಲ್ಲಿ ಆಡಲು ಅವರು ತೋರಿಸಿರುವ ನಿರಾಸಕ್ತಿಯೇ ಅವರನ್ನು ತಂಡದಿಂದ ಕೈಬಿಡಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ವಿಶ್ರಾಂತಿ ಅವಧಿಯಲ್ಲಿ ಕಿಶನ್, ಹಾರ್ದಿಕ್ ಪಾಂಡ್ಯ ಜೊತೆಗೆ ಅಭ್ಯಾಸ ನಡೆಸಿದ್ದರು. ಆದರೆ, ತನ್ನ ರಣಜಿ ಟ್ರೋಫಿ ಪಂದ್ಯಗಳಿಂದ ತಪ್ಪಿಸಿಕೊಂಡಿದ್ದರು. ಅವರು ಜಾರ್ಖಂಡ್ ಪರವಾಗಿ ರಣಜಿ ಟ್ರೋಫಿಯಲ್ಲಿ ಆಡುತ್ತಾರೆ.
ಶ್ರೇಯಸ್ ಅಯ್ಯರ್ ಕೂಡ ತನ್ನ ತಂಡ ಮುಂಬೈ ಪರವಾಗಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿರಲಿಲ್ಲ. ತನ್ನಲ್ಲಿ ದೈಹಿಕ ಕ್ಷಮತೆ ಇಲ್ಲ ಎಂಬ ಕಾರಣವನ್ನು ಅವರು ಅದಕ್ಕಾಗಿ ನೀಡಿದ್ದರು. ಆದರೆ, ಅವರ ಕುರಿತಾಗಿ ಎನ್ಸಿಎ ನೀಡಿರುವ ವರದಿ ಇದಕ್ಕೆ ಭಿನ್ನವಾಗಿದೆ ಎನ್ನಲಾಗಿದೆ.
ಈ ಅವಧಿಯಲ್ಲಿ, ಕೋಲ್ಕತ ನೈಟ್ ರೈಡರ್ಸ್ ತಂಡದ ಐಪಿಎಲ್ ಪೂರ್ವ ಶಿಬಿರದಲ್ಲಿ ಅವರು ಭಾಗವಹಿಸಿದ್ದರು ಎಂಬ ವರದಿಗಳಿದ್ದವು. ಅವರು ಈ ತಂಡದ ನಾಯಕರಾಗಿದ್ದಾರೆ. ಐಪಿಎಲ್ ಪೂರ್ವ ಶಿಬಿರದಲ್ಲಿ ಅಯ್ಯರ್ ಭಾಗವಹಿಸಿದ್ದರು ಎಂಬ ಸುದ್ದಿಯನ್ನು ಕೇಳಿ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಆಕ್ರೋಶಗೊಂಡಿದ್ದರು ಎಂದು ವರದಿಯೊಂದು ತಿಳಿಸಿದೆ. ತಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡು ಐಪಿಎಲ್ ಶಿಬಿರದಲ್ಲಿ ಅಯ್ಯರ್ ಭಾಗವಹಿಸಿದ್ದು ಅವರ ಕೋಪಕ್ಕೆ ಕಾರಣವಾಗಿತ್ತು.
ಬಿಸಿಸಿಐ ಆಯ್ಕೆಗಾರರು ಬಿಸಿಸಿಐ ಗುತ್ತಿಗೆಗಳ ಅಂತಿಮ ಪಟ್ಟಿಯನ್ನು ಶಿಫಾರಸು ಮಾಡುತ್ತಾರೆ.