ಸರ್ಕಾರಿ ಹಸ್ತಕ್ಷೇಪ ಆರೋಪ: ಐಸಿಸಿಯಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಮಾನತು
Photo: twitter.com/_FaridKhan
ಹೊಸದಿಲ್ಲಿ: ವಿಶ್ವಕಪ್ ಸೋಲಿನ ಸರಣಿಯಿಂದ ಜರ್ಜರಿತವಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಇದೀಗ ಗಾಯದ ಮೇಲೆ ಬರೆ ಎಂಬಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಅಮಾನತಿನ ಶಿಕ್ಷೆ ಎದುರಾಗಿದೆ. ದೇಶದ ಕ್ರೀಡಾಸಂಸ್ಥೆಯನ್ನು ನಿರ್ವಹಿಸುವಲ್ಲಿ ಸರ್ಕಾರದ ಹಸ್ತಕ್ಷೇಪ ಅಧಿಕವಾಗಿದೆ ಎಂಬ ಆರೋಪದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.
ಎಸ್ಎಲ್ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐಸಿಸಿ ಅಮಾನತುಗೊಳಿಸಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ನಿರಾಶಾದಾಯಕ ಪ್ರದರ್ಶನದ ಬೆನ್ನಲ್ಲೇ ಐಸಿಸಿಯಿಂದ ಈ ಆದೇಶ ಹೊರಬಿದ್ದಿದೆ.
"ಐಸಿಸಿ ಮಂಡಳಿ ಶುಕ್ರವಾರ ಸಭೆ ಸೇರಿ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಸದಸ್ಯನಾಗಿ ತಾನು ನಿರ್ವಹಿಸಬೇಕಾದ ಹೊಣೆಗಾರಿಕೆಗಳನ್ನು ಗಂಭೀರವಾಗಿ ಉಲ್ಲಂಘಿಸಿರುವುದನ್ನು ನಿರ್ಧರಿಸಿದೆ. ಅದರಲ್ಲೂ ಮುಖ್ಯವಾಗಿ ದೇಶದ ಕ್ರಿಕೆಟ್ ಮಂಡಳಿಯ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸುವಲ್ಲಿ ಮತ್ತು ಆಡಳಿತ, ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ ಎಂದು ಖಾತರಿಪಡಿಸುವಲ್ಲಿ ಗಂಭೀರ ಉಲ್ಲಂಘನೆಯಾಗಿದೆ" ಎಂದು ಐಸಿಸಿ ಪ್ರಕಟಣೆ ನೀಡಿದೆ.
"ಈ ಅಮಾನತಿನ ಷರತ್ತುಗಳನ್ನು ಐಸಿಸಿ ಮಂಡಳಿ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ" ಎಂದು ಪ್ರಕಟಣೆ ವಿವರಿಸಿದೆ. ಶ್ರೀಲಂಕಾದ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸುವ ನಿರ್ಣಯವನ್ನು ಶ್ರೀಲಂಕಾ ಸಂಸತ್ತು ಗುರುವಾರ ಅವಿರೋಧವಾಗಿ ಆಂಗೀಕರಿಸಿತ್ತು. ಆಡಳಿತ ಹಾಗೂ ವಿರೋಧ ಪಕ್ಷಗಳೆರಡೂ ಈ ನಿರ್ಣಯವನ್ನು ಬೆಂಬಲಿಸಿದ್ದವು.
ಶ್ರೀಲಂಕಾ ಸಂಸತ್ತು ಕೈಗೊಂಡಿರುವ ನಿರ್ಧಾರವು ಸರ್ಕಾರದ ಹಸ್ತಕ್ಷೇಪ ಇದೆ ಎಂಬ ನಿರ್ಧಾರಕ್ಕೆ ಬರಲು ಮತ್ತು ಶ್ರೀಲಂಕಾ ಸದಸ್ಯತ್ವವನ್ನು ಅಮಾನತು ಮಾಡುವ ನಿರ್ಧಾರಕ್ಕೆ ಪ್ರಬಲ ಪುರಾವೆ ಎಂದು ಸ್ಪಷ್ಟಪಡಿಸಿದೆ.