ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಅಮೋಲ್ ಮುಜುಂದಾರ್ ನೇಮಕ
Photo : PTI
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಮೋಲ್ ಮುಜುಂದಾರ್ ಅವರನ್ನು ಬುಧವಾರ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.
ರಮೇಶ್ ಪವಾರ್ ರಿಂದ ತೆರವವಾದ ಸ್ಥಾನಕ್ಕೆ ಅಮೋಲ್ ಮುಜುಂದಾರ್ ಆಯ್ಕೆ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ x ಖಾತೆ ಯಲ್ಲಿ ಮಾಹಿತಿ ಹಂಚಿಕೊಂಡಿದೆ.
ದೇಶೀಯ ಕ್ರಿಕೆಟ್ನಲ್ಲಿ ಮುಂಚೂಣಿಯಲ್ಲಿದ್ದ ಕ್ರಿಕೆಟಿಗ ಅಮೋಲ್ ಮುಜುಂದಾರ್ ಅವರನ್ನು ಬುಧವಾರ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಹೆಸರಿಸಲಾಗಿದೆ . ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯದ ಮುಜುಂದಾರ್, 171 ಪಂದ್ಯಗಳಲ್ಲಿ 30 ಶತಕಗಳು ಸಹಿತ 11,000 ಪ್ರಥಮ ದರ್ಜೆ ರನ್ ಗಳಿಸಿ ಬಾರಿಸಿದ್ದಾರೆ. ಮುಂಬೈ ತಂಡಕ್ಕೆ ಅನೇಕ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ಇವರ ಪಾತ್ರವು ಅವಿಸ್ಮರಣೀಯವಾದುದು.
ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯ ಮೂವರು ಸದಸ್ಯರ ಸಮಿತಿಯು ಅಮೋಲ್ ಮುಜುಂದಾರ್ ಅವರನ್ನು ಮುಖ್ಯ ಕೋಚ್ ಪಾತ್ರ ನಿರ್ವಹಿಸುವಂತೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.
"ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಅಮೋಲ್ ಮುಜುಂದಾರ್ ನೇಮಕವನ್ನು ನಾನು ಸ್ವಾಗತಿಸುತ್ತೇನೆ. ಅವರ ಅಧಿಕಾರಾವಧಿಯಲ್ಲಿ, ತಂಡವು ಆಟದ ವಿವಿಧ ಸ್ವರೂಪಗಳಲ್ಲಿ ಉನ್ನತಿ ಮತ್ತು ಉತ್ತಮ ಪ್ರದರ್ಶನವನ್ನು ಮುಂದುವರಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ತಂಡವು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಮುಜುಂದಾರ್ ಅವರ ಮಾರ್ಗದರ್ಶನ ಮತ್ತು ಮಾರ್ಗಸೂಚಿಯ ಅಡಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪ್ರಭಾವಶಾಲಿ ಪ್ರದರ್ಶನಗಳ ಮೂಲಕ ನಮ್ಮ ಆಟಗಾರರು ಅಪಾರ ಪ್ರಯೋಜನ ಪಡೆಯುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.