ಚೆನ್ನೈ ವಿರುದ್ಧ ಲಕ್ನೊಗೆ ರೋಚಕ ಜಯ
ಮಾರ್ಕಸ್ ಸ್ಟೊಯಿನಿಸ್ ಸ್ಪೋಟಕ ಶತಕಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್
Photo : x/@IPL
ಚೆನ್ನೈ : ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಶತಕದ ಬಲದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ನ 39ನೇ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್ ಅಂತರದಿಂದ ರೋಚಕವಾಗಿ ಸೋಲಿಸಿತು.
ಮಂಗಳವಾರ ನಡೆದ ಐಪಿಎಲ್ನ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ನಾಯಕ ಕೆ.ಎಲ್.ರಾಹುಲ್ ಚೆನ್ನೈ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಚೆನ್ನೈ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 210 ರನ್ ಪೇರಿಸಿತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ಲಕ್ನೊ ತಂಡ 19.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು.
ಸೋಲಿನ ಭೀತಿಯಲ್ಲಿದ್ದ ಲಕ್ನೊ ಪರ 56 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಶತಕ ಗಳಿಸಿದ ಆಸ್ಟ್ರೇಲಿಯದ ಆಟಗಾರ ಸ್ಟೋನಿಸ್ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಸ್ಟೊಯಿನಿಸ್ ಹಾಗೂ ದೀಪಕ್ ಹೂಡಾ 5ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ ಕೇವಲ 19 ಎಸೆತಗಳಲ್ಲಿ 56 ರನ್ ಗಳಿಸಿ 3 ಎಸೆತ ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.
ಸ್ಟೋನಿಸ್ ಅವರು ಪೂರನ್ ಜೊತೆಗೆ 4ನೇ ವಿಕೆಟ್ಗೆ 70 ರನ್ ಸೇರಿಸಿ ಲಕ್ನೊವನ್ನು ಗೆಲುವಿನತ್ತ ಮುನ್ನಡೆಸಿದರು.
ಲಕ್ನೊ ಪರ ನಿಕೊಲಸ್ ಪೂರನ್(34ರನ್), ದೀಪಕ್ ಹೂಡಾ(ಔಟಾಗದೆ 17)ಉಪಯುಕ್ತ ಕಾಣಿಕೆ ನೀಡಿದರು. ಚೆನ್ನೈ ಪರ ಮಥೀಶ ಪಥಿರಾನ(2-35) ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ನಾಯಕ ಋತುರಾಜ್ ಗಾಯಕ್ವಾಡ್ ಬಾರಿಸಿದ ಆಕರ್ಷಕ ಶತಕ(ಔಟಾಗದೆ 108, 60 ಎಸೆತ, 12 ಬೌಂಡರಿ, 3 ಸಿಕ್ಸರ್) ಹಾಗೂ ಆಲ್ರೌಂಡರ್ ಶಿವಂ ದುಬೆ ಮಿಂಚಿನ ಅರ್ಧಶತಕದ(66 ರನ್, 27 ಎಸೆತ, 3 ಬೌಂಡರಿ, 7 ಸಿಕ್ಸರ್)ಸಹಾಯದಿಂದ ಚೆನ್ನೈ ತಂಡವು ಸವಾಲಿನ ಮೊತ್ತ ಗಳಿಸಿತು.
ಮೊದಲ ಓವರ್ನಲ್ಲೇ ಆರಂಭಿಕ ಬ್ಯಾಟರ್ ಅಜಿಂಕ್ಯ ರಹಾನೆ(1 ರನ್, 3 ಎಸೆತ)ವಿಕೆಟನ್ನು ಕಳೆದುಕೊಂಡ ಚೆನ್ನೈ ಕಳಪೆ ಆರಂಭ ಪಡೆದಿತ್ತು. ಡ್ಯಾರಿಲ್ ಮಿಚೆಲ್(11 ರನ್, 10 ಎಸೆತ) ಹಾಗೂ ಇನ್ನೋರ್ವ ಆರಂಭಿಕ ಬ್ಯಾಟರ್ ಗಾಯಕ್ವಾಡ್ 2ನೇ ವಿಕೆಟ್ಗೆ 45 ರನ್ ಸೇರಿಸಿ ಇನಿಂಗ್ಸ್ ಆಧರಿಸಿದರು.
ಪವರ್ ಪ್ಲೇ ವೇಳೆ ಚೆನ್ನೈ 49 ರನ್ಗೆ 2 ವಿಕೆಟ್ ಕಳೆದುಕೊಂಡಿತು. ಮಿಚೆಲ್ ಔಟಾದ ನಂತರ ರವೀಂದ್ರ ಜಡೇಜಾ(16 ರನ್, 19 ಎಸೆತ)ಜೊತೆ ಕೈಜೋಡಿಸಿದ ಗಾಯಕ್ವಾಡ್ 3ನೇ ವಿಕೆಟ್ಗೆ 52 ರನ್ ಸೇರಿಸಿದರು.
ಜಡೇಜ ಬೇಗನೆ ಔಟಾದಾಗ ಶಿವಂ ದುಬೆ ಅವರೊಂದಿಗೆ 4ನೇ ವಿಕೆಟ್ಗೆ 104 ರನ್ ಜೊತೆಯಾಟ ನಡೆಸಿದ ಗಾಯಕ್ವಾಡ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಗಾಯಕ್ವಾಡ್ ಕೇವಲ 28 ಎಸೆತಗಳಲ್ಲಿ ಐಪಿಎಲ್ನಲ್ಲಿ 17ನೇ ಅರ್ಧಶತಕ ಪೂರೈಸಿದರು. 56 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಾಯದಿಂದ ಐಪಿಎಲ್ನಲ್ಲಿ 2ನೇ ಶತಕ ಪೂರೈಸಿದರು. 18ನೇ ಓವರ್ನಲ್ಲಿ 16 ರನ್ ಕಲೆ ಹಾಕಿದರು.
ಶಿವಂ ದುಬೆ ಅವರು ಮೊಹ್ಸಿನ್ ಖಾನ್ ಬೌಲಿಂಗ್ನಲ್ಲಿ ಬೆನ್ನು ಬೆನ್ನಿಗೆ ಬೌಂಡರಿ ಹಾಗೂ ಸಿಕ್ಸರ್ ಸಿಡಿಸುವ ಮೂಲಕ ಕೇವಲ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು.
ಚೆನ್ನೈ ಕೊನೆಯ 5 ಓವರ್ಗಳಲ್ಲಿ 71 ರನ್ ಗಳಿಸಿ ಲಕ್ನೊ ಗೆಲುವಿಗೆ ಸವಾಲಿನ ಮೊತ್ತ ನೀಡಿತು.
ಲಕ್ನೊ ಪರ ಮ್ಯಾಟ್ ಹೆನ್ರಿ(1-28), ಯಶ್ ಠಾಕೂರ್(1-47) ಹಾಗೂ ಮೊಹ್ಸಿನ್ ಖಾನ್(1-50) ತಲಾ ಒಂದು ವಿಕೆಟ್ ಪಡೆದರು.