ವಿಶ್ವಕಪ್ ನಿಂದ ಹಾರ್ದಿಕ್ ಪಾಂಡ್ಯ ಹೊರಕ್ಕೆ; ಬದಲಿ ಆಟಗಾರನಾಗಿ ಕನ್ನಡಿಗ ಪ್ರಸಿದ್ಧ ಕೃಷ್ಣ ಆಯ್ಕೆ
ಹಾರ್ದಿಕ್ ಪಾಂಡ್ಯ / ಪ್ರಸಿದ್ಧ ಕೃಷ್ಣ (Photo credit: PTI/BCCI)
ಹೊಸದಿಲ್ಲಿ: ಗಾಯದ ಸಮಸ್ಯೆಯಿಂದ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇನ್ನೂ ಚೇತರಿಸಿಕೊಳ್ಳದ ಕಾರಣ ಅವರು ವಿಶ್ವಕಪ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಈ ಮಾಹಿತಿಯನ್ನು ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ನೀಡಲಾಗಿದೆ. ಅಕ್ಟೋಬರ್ 19ರಂದು ಬಾಂಗ್ಲಾದೇಶದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಇದಾದ ನಂತರ, ಅವರು ಕ್ರಮವಾಗಿ ನ್ಯೂಝಿಲ್ಯಾಂಡ್, ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು, “ಐಸಿಸಿ ಪುರುಷರ ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ, ಗಾಯದಿಂದ ಸಮಸ್ಯೆಯಿಂದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇನ್ನೂ ಚೇತರಿಸಿಕೊಂಡಿಲ್ಲ ಹಾಗೂ ಕ್ರೀಡಾಕೂಟದ ಉಳಿದ ಪಂದ್ಯಗಳಿಗೆ ಲಭ್ಯರಿರುವುದಿಲ್ಲ” ಎಂದು ಹೇಳಿದೆ.
ಹಾರ್ದಿಕ್ ಪಾಂಡ್ಯರ ಬದಲಿಗೆ ಪ್ರಸಿದ್ಧ ಕೃಷ್ಣ ಅವರನ್ನು ಬದಲಿ ಆಟಗಾರನನ್ನಾಗಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿದೆ.
“ಹಾರ್ದಿಕ್ ಪಾಂಡ್ಯ ಬದಲಿಗೆ ಭಾರತ ತಂಡಕ್ಕೆ ಸೇರ್ಪಡೆಯಾಗುತ್ತಿರುವ ಆಟಗಾರ ಪ್ರಸಿದ್ಧ ಕೃಷ್ಣ ಆಗಿದ್ದಾರೆ. ಅನನುಭವಿ ವೇಗದ ಬೌಲರ್ ಆಗಿರುವ ಅವರನ್ನು ಆಡುವ ಗುಂಪಿಗೆ ಸೇರ್ಪಡೆ ಮಾಡಿಕೊಳ್ಳಲು ಕ್ರೀಡಾಕೂಟದ ತಾಂತ್ರಿಕ ಸಮಿತಿಯು ಶನಿವಾರ ಅನುಮೋದನೆ ನೀಡಿದೆ” ಎಂದೂ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಪರಿಷ್ಕೃತ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಪ್ರಸಿದ್ಧ ಕೃಷ್ಣ, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮುಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶಾನ್ ಹಾಗೂ ಸೂರ್ಯಕುಮಾರ್ ಯಾದವ್.