ಇನ್ನು 2 ವರ್ಷಗಳಲ್ಲಿ ಇನ್ನೊಂದು ವಿಶ್ವಕಪ್ ಬರುತ್ತದೆ : ರಿಂಕು ಸಿಂಗ್

ರಿಂಕು ಸಿಂಗ್ | PTI
ಹೊಸದಿಲ್ಲಿ : ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಆಡುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ರಿಂಕು ಸಿಂಗ್ ವಿಫಲರಾಗಿದ್ದಾರೆ. ಆಲ್ರೌಂಡರ್ ಗಳಾಗಿ ಶಿವಮ್ ದುಬೆ ಮತ್ತು ಅಕ್ಷರ್ ಪಟೇಲ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹಾಗಾಗಿ, ರಿಂಕು ಸಿಂಗ್ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಗಿದೆ.
ಈ ಬಾರಿಯ ಐಪಿಎಲ್ ನಲ್ಲಿ ಮಿಂಚಲು ರಿಂಕು ಸಿಂಗ್ ಗೆ ಅವಕಾಶ ಸಿಗಲಿಲ್ಲ. ಅವರಿಗೆ ಬ್ಯಾಟ್ ಮಾಡಲು ಹೆಚ್ಚಿನ ಅವಕಾಶ ಲಭಿಸಲಿಲ್ಲ. ಹಾಗಾಗಿ, ಅವರಿಗೆ ಕೇವಲ 168 ರನ್ ಗಳನ್ನು ಗಳಿಸಲು ಸಾಧ್ಯವಾಯಿತು. ಆದರೆ, ಅವರ ತಂಡ ಕೋಲ್ಕತ ನೈಟ್ ರೈಡರ್ಸ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿರುವ ಬಗ್ಗೆ ರಿಂಕು ಇತ್ತೀಚೆಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತಂಡದ ಸಂಯೋಜನೆಯಿಂದಾಗಿ ತನಗೆ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಈ ಬಗ್ಗೆ ನಾಯಕ ರೋಹಿತ್ ಶರ್ಮ ಅವರ ಜೊತೆಗೆ ಮಾತನಾಡಿರುವುದಾಗಿಯೂ ಅವರು ಹೇಳಿದ್ದಾರೆ.
“ಹೌದು, ಉತ್ತಮ ನಿರ್ವಹಣೆಯ ಹೊರತಾಗಿಯೂ ತಂಡಕ್ಕೆ ಆಯ್ಕೆಯಾಗದಿದ್ದರೆ ಯಾರಿಗಾದರೂ ಬೇಸರವಾಗುತ್ತದೆ. ಆದರೆ, ತಂಡ ಸಂಯೋಜನೆಯ ಕಾರಣಕ್ಕಾಗಿ ನಾನು ಈ ಬಾರಿ ಆಯ್ಕೆಯಾಗಿಲ್ಲ. ನಮ್ಮ ಕೈಯಲ್ಲಿರದ ವಿಷಯದ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ಮೊದಲು ನನಗೆ ಸ್ವಲ್ಪ ಬೇಸರವಾಗಿತ್ತು. ಏನಾಗಿದೆಯೋ ಅದು ಸರಿಯಾಗಿಯೇ ಇದೆ. ಏನಾಗಬೇಕೋ ಅದು ಒಳ್ಳೆಯದಕ್ಕೇ ಆಗುತ್ತದೆ. ರೋಹಿತ್ ಭಯ್ಯ ವಿಶೇಷವಾದದ್ದೇನನ್ನೂ ಹೇಳಲಿಲ್ಲ. ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸು ಎಂದಷ್ಟೇ ಅವರು ಹೇಳಿದರು. ಎರಡು ವರ್ಷಗಳ ಬಳಿಕ ಇನ್ನೊಂದು ವಿಶ್ವಕಪ್ ಬರುತ್ತದೆ. ಹಾಗಾಗಿ, ತುಂಬಾ ಚಿಂತಿಸುವ ಅಗತ್ಯವಿಲ್ಲ. ಇದನ್ನು ಅವರು ನನಗೆ ಹೇಳಿದರು’’ ಎಂದು ‘ದೈನಿಕ್ ಜಾಗರಣ್’ಗೆ ನೀಡಿದ ಸಂದರ್ಶನದಲ್ಲಿ ರಿಂಕು ಸಿಂಗ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸುಲಭವಾಗಿ ಸೋಲಿಸಿ ಪ್ರಶಸ್ತಿ ಗೆದ್ದಿದೆ.