ಕೇರಳದಲ್ಲಿ ನಡೆಯುವ ಪಂದ್ಯದಲ್ಲಿ ಭಾಗವಹಿಸಲಿರುವ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫುಟ್ಬಾಲ್ ತಂಡ!
Photo credit:X/@WeAreMessi
ಕೇರಳ: ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಫುಟ್ಬಾಲ್ ತಂಡವು 2025ರಲ್ಲಿ ಅಂತರಾಷ್ಟ್ರೀಯ ಪಂದ್ಯಕ್ಕಾಗಿ ಕೇರಳಕ್ಕೆ ಭೇಟಿ ನೀಡಲಿದೆ ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ವಿ. ಅಬ್ದುರಹಿಮಾನ್, ಈ ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಸಲಾಗುವುದು. ಈ ಉನ್ನತ ಮಟ್ಟದ ಫುಟ್ಬಾಲ್ ಪಂದ್ಯ ಆಯೋಜನೆಗೆ ಹಣಕಾಸನ್ನು ರಾಜ್ಯದ ವ್ಯಾಪಾರಿಗಳು ನೀಡಲಿದ್ದಾರೆ, ಈ ಪಂದ್ಯ ಯಶಸ್ವಿಗೊಳಿಸುವ ಭರವಸೆಯಿದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫುಟ್ಬಾಲ್ ಮತ್ತು ಲಿಯೋನೆಲ್ ಮೆಸ್ಸಿ ಅಭಿಮಾನಿಗಳಿದ್ದಾರೆ. ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಭಾರತದಲ್ಲಿ 2011ರಲ್ಲಿ ಕೊನೆಯ ಬಾರಿಗೆ ಆಡಿದ್ದರು. ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಅಂತರಾಷ್ಟ್ರೀಯ ಪಂದ್ಯದಲ್ಲಿ ಅರ್ಜೆಂಟೀನಾ ವೆನೆಜುವೆಲಾ ತಂಡವನ್ನು ಎದುರಿಸಿತ್ತು.