ಅರ್ಶದೀಪ್ ಸಿಂಗ್ ಐಸಿಸಿ ಪುರುಷರ ವರ್ಷದ ಟಿ20 ಕ್ರಿಕೆಟಿಗ
ಅರ್ಶದೀಪ್ ಸಿಂಗ್ | PTI
ದುಬೈ : ಭಾರತದ ಟಿ20 ವಿಶ್ವಕಪ್ ಹೀರೊ, ಎಡಗೈ ವೇಗಿ ಅರ್ಶದೀಪ್ ಸಿಂಗ್ರನ್ನು ಐಸಿಸಿ ಪುರುಷರ ಟಿ20ಐ 2024ರ ವರ್ಷದ ಕ್ರಿಕೆಟಿಗ ಎಂಬುದಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಘೋಷಿಸಿದೆ.
ಈ ಘೋಷಣೆಯು ಅತ್ಯಂತ ಕಿರು ಮಾದರಿಯ ಕ್ರಿಕೆಟ್ನ ಮಹತ್ವದ ಬೌಲರ್ಗಳ ಪೈಕಿ ಒಬ್ಬರೆನ್ನುವ ಅವರ ಹಿರಿಮೆಯನ್ನು ಎತ್ತಿ ಹಿಡಿದಿದೆ.
25 ವರ್ಷದ ಅರ್ಶದೀಪ್ 2024ರ ಉದ್ದಕ್ಕೂ ಅಮೋಘ ನಿರ್ವಹಣೆ ನೀಡಿದ್ದು, 18 ಪಂದ್ಯಗಳಿಂದ 36 ವಿಕೆಟ್ಗಳನ್ನು ಪಡೆದಿದ್ದಾರೆ.
10.80 ಸ್ಟ್ರೈಕ್ರೇಟ್ ಅವರ ಅಮೋಘ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ತೋರಿಸುತ್ತದೆ. ಅದರಲ್ಲೂ ಮುಖ್ಯವಾಗಿ ಪವರ್ಪ್ಲೇ ಮತ್ತು ಅಂತಿಮ ಓವರ್ಗಳಲ್ಲಿ ಅವರು ವಹಿಸುವ ಪ್ರಧಾನ ಪಾತ್ರವನ್ನು ಇದು ಬಿಂಬಿಸುತ್ತದೆ.
ಕ್ಯಾಲೆಂಡರ್ ವರ್ಷವೊಂದರಲ್ಲಿ ಪಡೆದ ಟಿ20ಐ ವಿಕೆಟ್ಗಳ ಪಟ್ಟಿಯಲ್ಲಿ ಅರ್ಶದೀಪ್ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಮೊದಲ ನಾಲ್ಕು ಸ್ಥಾನಗಳಲ್ಲಿ ಕ್ರಮವಾರಿ ಹಾಂಕಾಂಗ್ನ ಎಹ್ಸಾನ್ ಖಾನ್ (46 ವಿಕೆಟ್), ಯುಎಇಯ ಜುನೈದ್ ಸಿದ್ದೀಕ್ (40), ಶ್ರೀಲಂಕಾದ ವನಿಂಡು ಹಸರಂಗ (38) ಮತ್ತು ಸೌದಿ ಅರೇಬಿಯದ ಉಸ್ಮಾನ್ ನಜೀಬ್ (38) ಇದ್ದಾರೆ.