ನಿವೃತ್ತಿ ಬಳಿಕ ಚೆನ್ನೈಗೆ ಬಂದಿಳಿದ ಅಶ್ವಿನ್; ಹೂಮಳೆ, ಲೈವ್ಬ್ಯಾಂಡ್ ಮೂಲಕ ಸ್ವಾಗತಿಸಿದ ಅಭಿಮಾನಿಗಳು
ತಂಡದ ನಾಯಕನಾಗದಿರುವುದಕ್ಕೆ ವಿಷಾದವಿಲ್ಲ ಎಂದ ಸ್ಪಿನ್ನರ್
ರವಿಚಂದ್ರನ್ ಅಶ್ವಿನ್ | PC : X
ಚೆನ್ನೈ: ಬ್ರಿಸ್ಬೇನ್ನಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗುರುವಾರ ಬೆಳಗ್ಗೆ ಚೆನ್ನೈಗೆ ಆಗಮಿಸಿದರು. ಅವರನ್ನು ಹೂಮಳೆ ಮತ್ತು ಲೈವ್ಬ್ಯಾಂಡ್ ಮೂಲಕ ಸ್ವಾಗತಿಸಲಾಯಿತು.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಅಧಿಕಾರಿಗಳು ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಹೊರಗೆ ಕಾಲಿಟ್ಟ ಅವರು ನೇರವಾಗಿ ಕಾರನ್ನೇರಿದರು. ಅಲ್ಲಿ ಕಾಯುತ್ತಿದ್ದ ಮಾಧ್ಯಮದೊಂದಿಗೆ ಅವರು ಮಾತನಾಡಲಿಲ್ಲ.
ಅವರು ಮನೆಯೊಳಗೆ ಕಾಲಿಡುತ್ತಿದ್ದಂತೆ ಹೆತ್ತವರು ಅವರನ್ನು ಆಲಿಂಗಿಸಿಕೊಂಡರು. ಮನೆಯೊಳಗೆ ಅವರಿಗೆ ಹೂಹಾರ ಹಾಕಲಾಯಿತು. ಅಲ್ಲಿದ್ದ ಕೆಲವರಿಗೆ ಆಟೊಗ್ರಾಫ್ ನೀಡಿದರು.
‘‘ಇಷ್ಟೊಂದು ಜನರು ಇಲ್ಲಿಗೆ ಬರುತ್ತಾರೆಂದು ನಾನು ಎಣಿಸಿರಲಿಲ್ಲ. ನಾನು ಸದ್ದಿಲ್ಲದೆ ಮನೆಗೆ ಬಂದು ವಿಶ್ರಮಿಸಲು ಬಯಸಿದ್ದೆ. ಆದರೆ ನೀವು ನನ್ನ ದಿನವನ್ನು ಸ್ಮರಣೀಯವಾಗಿಸಿದಿರಿ. ನಾನು ಹಲವು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದೇನೆ. ಆದರೆ, ಇಂಥದ್ದೊಂದನ್ನು ನಾನು ಈ ಹಿಂದೆ ನೋಡಿದ್ದು 2011ರ ವಿಶ್ವಕಪ್ ಬಳಿಕ’’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
‘ತಂಡದ ನಾಯಕನಾಗದಿರುವುದಕ್ಕೆ ವಿಷಾದವಿಲ್ಲ’:
ಆದರೆ, ಮನೆ ತಲುಪಿದ ಬಳಿಕ ಹಾಗೂ ಹೆತ್ತವರು ಮತ್ತು ಹಿತೈಷಿಗಳೊಂದಿಗೆ ಬೆರೆತ ಬಳಿಕ ಅಶ್ವಿನ್ ತನ್ನ ಮನಸ್ಸು ಬದಲಾಯಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ತನ್ನ ನಿವೃತ್ತಿ ನಿರ್ಧಾರದ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿದರು.
‘‘ತುಂಬಾ ಜನರಿಗೆ ಇದು ಭಾವನಾತ್ಮಕ ವಿಷಯವಾಗಿದೆ. ಬಹುಷಃ ಸ್ವಲ್ಪ ಸಮಯದಲ್ಲಿ ಅದನ್ನು ಅವರು ಅರಗಿಸಿಕೊಳ್ಳುತ್ತಾರೆ. ಆದರೆ ನನಗೆ ಅದು ವೈಯಕ್ತಿಕವಾಗಿ ದೊಡ್ಡ ನೆಮ್ಮದಿ ಮತ್ತು ತೃಪ್ತಿ ನೀಡಿದೆ. ಅದು ಸಹಜವಾಗಿ ಬಂದ ನಿರ್ಧಾರವಾಗಿದೆ ಮತ್ತು ಸ್ವಲ್ಪ ಸಮಯದಿಂದ ಅದು ನನ್ನ ತಲೆಯಲ್ಲಿ ಇತ್ತು. ಬ್ರಿಸ್ಬೇನ್ ಟೆಸ್ಟ್ನ ನಾಲ್ಕನೇ ದಿನದಂದು ನಿವೃತ್ತಿ ತೆಗೆದುಕೊಳ್ಳಬೇಕೆಂದು ನನಗನಿಸಿತು ಮತ್ತು ಹಾಗೆಯೇ ಮಾಡಿದೆ’’ ಎಂದು ಅಶ್ವಿನ್ ಹೇಳಿದರು.
‘‘ಅದು (ನಿವೃತ್ತಿ) ನನ್ನ ಮಟ್ಟಿಗೆ ದೊಡ್ಡ ನಿರ್ಧಾರವೇನೂ ಅಲ್ಲ. ಯಾಕೆಂದರೆ ನಾನು ಹೊಸ ಹಾದಿಯೊಂದನ್ನು ಹುಡುಕುತ್ತೇನೆ’’ ಎಂದು ಅವರು ತಿಳಿಸಿದರು.
ಭಾರತೀಯ ಕ್ರಿಕೆಟ್ ತಂಡದ ನಾಯಕನಾಗದಿರುವುದಕ್ಕೆ ನಿಮಗೆ ವಿಷಾದವಿದೆಯೇ ಎಂಬ ಪ್ರಶ್ನೆಗೆ, ಇಲ್ಲ ಎಂದು ಉತ್ತರಿಸಿದರು.
‘‘ವಿಷಾದವೇನೂ ಇಲ್ಲ. ವಾಸ್ತವವಾಗಿ, ನಾನು ಶೂನ್ಯ ವಿಷಾದವನ್ನು ಹೊಂದಿದ್ದೇನೆ. ಅಂಥ ವಿಷಾದಗಳನ್ನು ಹೊಂದಿರುವ ಜನರನ್ನು ನಾನು ನೋಡಿದ್ದೇನೆ. ಆದರೆ, ನನ್ನಲ್ಲಿ ಅಂಥ ವಿಷಾದಗಳಿಲ್ಲ’’ ಎಂದು 537 ಟೆಸ್ಟ್ ವಿಕೆಟ್ಗಳನ್ನು ಉರುಳಿಸಿರುವ ಸ್ಪಿನ್ನರ್ ಹೇಳಿದರು.
ಅವರು ಟೆಸ್ಟ್ನಲ್ಲಿ ಭಾರತದ ಎರಡನೇ ಗರಿಷ್ಠ ವಿಕೆಟ್ ಗಳಿಕೆದಾರರಾಗಿದ್ದಾರೆ. ಮೊದಲ ಸ್ಥಾನದಲ್ಲಿ 619 ವಿಕೆಟ್ಗಳನ್ನು ಪಡೆದಿರುವ ಅನಿಲ್ ಕುಂಬ್ಳೆ ಇದ್ದಾರೆ.
‘ಬೇರೆ ದಾರಿಯಲ್ಲಿ ಸಾಗಬೇಕು ಎನ್ನುವ ಸೂಚನೆ ಸಿಕ್ಕಿತ್ತು’:
‘‘ನೇರವಾಗಿ ಹೇಳಬೇಕೆಂದರೆ, ನಾವೆಲ್ಲರೂ ಬದುಕಿನಲ್ಲಿ ಹಲವು ಸಂಗತಿಗಳನ್ನು ದಾಟಿ ಬರುತ್ತೇವೆ. ಇದು ಕೇವಲ ಕ್ರಿಕೆಟಿಗರಿಗೆ ಅನ್ವಯಿಸುವುದಲ್ಲ, ಎಲ್ಲರಿಗೂ ಅನ್ವಯಿಸುತ್ತದೆ. ಸಾಮಾನ್ಯವಾಗಿ ನಾನು ಮಲಗುವಾಗ, ಪಡೆದ ವಿಕೆಟ್ಗಳು, ಮಾಡಿದ ರನ್ಗಳು ಮುಂತಾದವುಗಳನ್ನು ಜ್ಞಾಪಿಸಿಕೊಳ್ಳುತ್ತೇನೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಅಂಥ ಯಾವುದೇ ನೆನಪುಗಳಿಲ್ಲ’’ ಎಂದು ಅಶ್ವಿನ್ ಹೇಳಿದರು.
‘‘ಈಗ ನಾವು ಬೇರೆ ದಾರಿಯಲ್ಲಿ ಸಾಗಬೇಕು ಎನ್ನುವುದರ ಸ್ಪಷ್ಟ ಸೂಚನೆ ಅದಾಗಿದೆ’’ ಎಂದರು.
‘‘ನಾನು ಯಾವುದೇ ಹೊಸ ಗುರಿಗಳನ್ನು ಹಾಕಿಕೊಂಡಿಲ್ಲ. ಈಗ ನಾನು ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ್ದೇನೆ, ಅಷ್ಟೆ. ನಿಜವಾಗಿ, ನಿಷ್ಕ್ರಿಯವಾಗಿರುವುದು ನನಗೆ ಕಷ್ಟ. ಆದರೆ, ಈಗ ನಾನು ಅದನ್ನು ಪ್ರಯತ್ನಿಸಬೇಕಾಗಿದೆ’’ ಎಂದು ಅಶ್ವಿನ್ ನುಡಿದರು.
ಐಪಿಎಲ್ಗೆ ನಿವತ್ತಿಯಿಲ್ಲ:
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ಕ್ಲಬ್ ಕ್ರಿಕೆಟ್ನಲ್ಲಿ ಆಡುವುದನ್ನು ಆರ್. ಅಶ್ವಿನ್ ಮುಂದುವರಿಸಲಿದ್ದಾರೆ. ಅವರು ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ.
‘‘ಕ್ಲಬ್ ಕ್ರಿಕೆಟ್ ನನ್ನಲ್ಲಿ ಈಗಲೂ ಪ್ರಖರವಾಗಿದೆ. ನಾನು ಸಿಎಸ್ಕೆ ಪರವಾಗಿ ಆಡುತ್ತಿದ್ದೇನೆ. ಸಾಧ್ಯವಿರುವಷ್ಟು ಸಮಯ ಆಡಲು ಬಯಸಿದರೆ ಅಚ್ಚರಿ ಪಡಬೇಡಿ. ಕ್ರಿಕೆಟಿಗ ಅಶ್ವಿನ್ನ ಕತೆ ಮುಗಿಯಿತು ಎಂದು ನನಗನಿಸುವುದಿಲ್ಲ. ಭಾರತೀಯ ಕ್ರಿಕೆಟಿಗ ಅಶ್ವಿನ್ ಮಾತ್ರ ನಿವೃತ್ತಿಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅಷ್ಟೆ’’ ಎಂದರು.