'ಪೆನಾಲ್ಟಿ ಟೈಮ್' ಇಲ್ಲದೆ ಮೈದಾನಕ್ಕೆ ಮರಳಿದ ಅಶ್ವಿನ್
ರವಿಚಂದ್ರನ್ ಅಶ್ವಿನ್ | Photo: PTI
ರಾಜ್ಕೋಟ್: ಅನಾರೋಗ್ಯ ಪೀಡಿತರಾಗಿದ್ದ ತಾಯಿಯನ್ನು ನೋಡಲು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ನ ಎರಡನೇ ದಿನವಾದ ಶುಕ್ರವಾರ ಚೆನ್ನೈಗೆ ಹೋಗಿದ್ದ ಭಾರತ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ನಾಲ್ಕನೇ ದಿನವಾದ ಶನಿವಾರ ಚಹಾ ನಂತರದ ಆಟದ ಅವಧಿಯಲ್ಲಿ ಮೈದಾನಕ್ಕೆ ವಾಪಸಾದರು.
500 ಟೆಸ್ಟ್ ವಿಕೆಟ್ಗಳ ಸಾಧನೆ ಮಾಡಿದ ಗಂಟೆಗಳ ಬಳಿಕ ಅಶ್ವಿನ್ ಚೆನ್ನೈಗೆ ಹೋಗಿದ್ದರು. ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಆಟದ ಷರತ್ತುಗಳನ್ವಯ, ಪಂದ್ಯದ ಮೂರನೇ ದಿನದ ಅನುಪಸ್ಥಿತಿಗಾಗಿ ಅವರಿಗೆ ಯಾವುದೇ ದಂಡ ವಿಧಿಸಲಾಗಿಲ್ಲ.
ಐಸಿಸಿಯ 24.3.2 ನಿಯಮದನ್ವಯ, “ಓರ್ವ ನಿಯೋಜಿತ ಆಟಗಾರ ಅನಾರೋಗ್ಯ ಅಥವಾ ಆಂತರಿಕ ಗಾಯವನ್ನು ಹೊರತುಪಡಿಸಿ, ಇತರ ಸಂಪೂರ್ಣ ಸ್ವೀಕಾರಾರ್ಹ ಕಾರಣಕ್ಕಾಗಿ ಮೈದಾನದಿಂದ ಹೊರಹೋಗಿದ್ದಾರೆ ಎನ್ನುವುದು ಅಂಪಯರ್ ಗಳಿಗೆ ಮನವರಿಕೆಯಾದರೆ ಆ ಆಟಗಾರನ ಅನುಪಸ್ಥಿತಿಗೆ ದಂಡ ವಿಧಿಸಲಾಗುವುದಿಲ್ಲ”.
ರವಿವಾರ ಮಧ್ಯಾಹ್ನ ರಾಜ್ಕೋಟ್ಗೆ ಮರಳಿದ ಅಶ್ವಿನ್, ಚಹಾ ವಿರಾಮದ ಅವಧಿಯಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡು ಬಂತು.
ಅದಕ್ಕೂ ಮೊದಲು, ಅಶ್ವಿನ್ ತಂಡವನ್ನು ಸೇರಿಕೊಳ್ಳುವುದನ್ನು ನಾಲ್ಕನೇ ದಿನದಾಟದ ಮೊದಲ ಅವಧಿಯ ಆಟದ ವೇಳೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಖಚಿತಪಡಿಸಿತ್ತು.