ಏಶ್ಯಕಪ್: ಒಂದೇ ಓವರ್ನಲ್ಲಿ 4 ವಿಕೆಟ್ಗಳನ್ನು ಕಬಳಿಸಿದ ಭಾರತದ ಮೊದಲ ಬೌಲರ್ ಮುಹಮ್ಮದ್ ಸಿರಾಜ್
Photo: twitter/BCCI
ಕೊಲಂಬೊ : ವೇಗದ ಬೌಲರ್ ಮುಹಮ್ಮದ್ ಸಿರಾಜ್ ಒಂದೇ ಓವರ್ನಲ್ಲಿ 4 ವಿಕೆಟ್ಗಳನ್ನು ಕಬಳಿಸಿದ ಭಾರತದ ಏಕೈಕ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಶ್ರೀಲಂಕಾ ವಿರುದ್ಧ ರವಿವಾರ ನಡೆದ ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಸಿರಾಜ್ ಈ ಮಹತ್ವದ ಸಾಧನೆ ಮಾಡಿದರು.
ಹೊಸ ಚೆಂಡಿನಲ್ಲಿ ಮಾರಕ ಬೌಲಿಂಗ್ ಮಾಡಿದ ಸಿರಾಜ್ ಮೊದಲಿಗೆ ಪಥುನ್ ನಿಶಾಂಕ ವಿಕೆಟನ್ನು ಉರುಳಿಸಿದರು. ಆ ನಂತರ ಚರಿತ್ ಅಸಲಂಕ, ಸದೀರ ಸಮರವಿಕ್ರಮ ಹಾಗೂ ಧನಂಜಯ ಡಿಸಿಲ್ವ ವಿಕೆಟ್ಗಳನ್ನು ಉರುಳಿಸಿದರು. ಆಗ ಶ್ರೀಲಂಕಾ 4 ಓವರ್ಗಳಲ್ಲಿ 12 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಧನಂಜಯ ಡಿಸಿಲ್ವ ಅವರು ಸಿರಾಜ್ಗೆ ಹ್ಯಾಟ್ರಿಕ್ ವಿಕೆಟ್ ನಿರಾಕರಿಸಿದರು. ಅದರೆ ಸಿರಾಜ್ ಎಸೆದ ಇನಿಂಗ್ಸ್ನ 3ನೇ ಓವರ್ನ ಕೊನೆಯ ಎಸೆತದಲ್ಲಿ ಔಟಾದರು.
ತನ್ನ ಶ್ರೇಷ್ಠ ಸ್ಪೆಲ್ ಮುಂದುವರಿಸಿದ ಸಿರಾಜ್ ಶ್ರೀಲಂಕಾದ ನಾಯಕ ದಸುನ್ ಶನಕರನ್ನು ಶೂನ್ಯಕ್ಕೆ ಔಟ್ ಮಾಡಿ 5 ವಿಕೆಟ್ ಗೊಂಚಲು ಪಡೆದರು. ಲಂಕೆಯ ಪರ ಅಗ್ರ ಸ್ಕೋರರ್ ಆಗಿದ್ದ ಕುಶಾಲ್ ಮೆಂಡಿಸ್ (17 ರನ್)ವಿಕೆಟನ್ನು ಪಡೆದ ಸಿರಾಜ್ 21 ರನ್ ನೀಡಿ ಒಟ್ಟು 6 ವಿಕೆಟ್ಗಳನ್ನು ಪಡೆದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಭಾರತದ ಪರ ಎರಡನೇ ಶ್ರೇಷ್ಠ ಬೌಲಿಂಗ್ ಸಂಘಟಿಸಿದರು.
ಸಿರಾಜ್ ವೇಗವಾಗಿ(16 ಎಸೆತಗಳಲ್ಲಿ) ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಶ್ರೀಲಂಕಾದ ಮಾಜಿ ವೇಗದ ಬೌಲರ್ ಚಾಮಿಂಡ ವಾಸ್ ದಾಖಲೆಯನ್ನು ಸರಿಗಟ್ಟಿದರು. ವಾಸ್ 2003ರಲ್ಲಿ ಬಾಂಗ್ಲಾದೇಶ ವಿರುದ್ಧ ಈ ಸಾಧನೆ ಮಾಡಿದ್ದರು.
29ರ ಹರೆಯದ ಸಿರಾಜ್ ತಾನಾಡಿದ 29ನೇ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್ ವೇಳೆ 50 ವಿಕೆಟ್ ಪೂರೈಸಿದರು. ಭಾರತದ ಬೌಲರ್ಗಳಲ್ಲಿ 4ನೇ ಜಂಟಿ ವೇಗದಲ್ಲಿ ಈ ಮೈಲಿಗಲ್ಲು ತಲುಪಿದರು. ಏಕದಿನ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಟುವರ್ಟ್ ಬಿನ್ನಿ ನಂತರ ಸಿರಾಜ್ 2ನೇ ಶ್ರೇಷ್ಠ ಬೌಲಿಂಗ್(6-21)ಸಂಘಟಿಸಿದರು. ಬಿನ್ನಿ 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಕೇವಲ 4 ರನ್ ನೀಡಿ 6 ವಿಕೆಟ್ ಗೊಂಚಲು ಪಡೆದಿದ್ದರು.
ಭಾರತದ ಪರ ಆರು ಬೌಲರ್ಗಳು ಆರು ವಿಕೆಟ್ಗಳನ್ನು ಪಡೆದಿದ್ದಾರೆ. ಆಶೀಷ್ ನೆಹ್ರಾ ಏಕದಿನ ಪಂದ್ಯದಲ್ಲಿ 2 ಬಾರಿ ಈ ಸಾಧನೆ ಮಾಡಿದ್ದಾರೆ.