ಏಶ್ಯಕಪ್, ಏಕದಿನ ವಿಶ್ವಕಪ್: ಬಾಂಗ್ಲಾದೇಶಕ್ಕೆ ನೂತನ ನಾಯಕನ ನೇಮಕ
ಶಾಕಿಬ್ ಅಲ್ ಹಸನ್ | PHOTO : NDTV
ಢಾಕಾ: ಈ ವರ್ಷ ನಡೆಯಲಿರುವ ಏಶ್ಯಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳಿಗೆ ಹಿರಿಯ ಆಲ್ರೌಂಡರ್ ಶಾಕಿಬ್ ಅಲ್ ಹಸನ್ ರನ್ನು ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕನನ್ನಾಗಿ ಶುಕ್ರವಾರ ನೇಮಿಸಲಾಗಿದೆ.
ಬಾಂಗ್ಲಾದೇಶವು ಎರಡು ಪ್ರಮುಖ ಟೂರ್ನಿಯಲ್ಲದೆ ಸೆಪ್ಟಂಬರ್ ಅಂತ್ಯಕ್ಕೆ ಸೀಮಿತ ಓವರ್ ಸರಣಿಯಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ಏಶ್ಯಕಪ್ ಹಾಗೂ ವರ್ಲ್ಡ್ಕಪ್ ಗೆ ಶಾಕಿಬ್ ರನ್ನು ನಾಯಕರನ್ನಾಗಿ ನಾವು ನೇಮಿಸಿದ್ದೇವೆ. ವಿಶ್ವಕಪ್ ಹಾಗು ಏಶ್ಯಕಪ್ ತಂಡಗಳನ್ನು ನಾಳೆ ಪ್ರಕಟಿಸಲಾಗುತ್ತದೆ. ಆಯ್ಕೆಗಾರರು 17 ಸದಸ್ಯರುಗಳನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಲಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ(ಬಿಸಿಬಿ)ಅಧ್ಯಕ್ಷ ನಝ್ಮುಲ್ ಹಸನ್ ಹೇಳಿದ್ದಾರೆ.
ಬೆನ್ನುನೋವಿನಿಂದಾಗಿ ಏಶ್ಯಕಪ್ನಿಂದ ಹೊರಗುಳಿದಿದ್ದ ತಮೀಮ್ ಇಕ್ಬಾಲ್ರಿಂದ ತೆರವಾದ ನಾಯಕನ ಸ್ಥಾನಕ್ಕೆ ಹಸನ್ ನೇಮಕಗೊಂಡಿದ್ದಾರೆ.
ಇದೀಗ ಶಾಕಿಬ್ ಬಾಂಗ್ಲಾದೇಶದ ಎಲ್ಲ ಮೂರು ಮಾದರಿ ಕ್ರಿಕೆಟ್ನ ನಾಯಕ ಎನಿಸಿಕೊಂಡಿದ್ದಾರೆ.ಕಳೆದ ವರ್ಷದ ಆರಂಭದಿಂದ ಟೆಸ್ಟ್ ಹಾಗೂ ಟಿ-20 ತಂಡಕ್ಕೆ ಶಾಕಿಬ್ ನಾಯಕನಾಗಿದ್ದರು.
2017ರಲ್ಲಿ ಐರ್ಲ್ಯಾಂಡ್ ವಿರುದ್ಧ ಏಕದಿನದಲ್ಲಿ ಬಾಂಗ್ಲಾದೇಶವನ್ನು ಕೊನೆಯ ಬಾರಿ ನಾಯಕನಾಗಿ ಮುನ್ನಡೆಸಿದ್ದರು. ಈ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿತ್ತು.
ಶಾಕಿಬ್ ಬಾಂಗ್ಲಾದೇಶವನ್ನು 52 ಏಕದಿನ, 19 ಟೆಸ್ಟ್ ಹಾಗೂ 39 ಟಿ-20 ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದ್ದರು.