ಏಶ್ಯಕಪ್ ಸೂಪರ್-4 ಪಂದ್ಯ: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಜಯಭೇರಿ
ಸಮರವಿಕ್ರಮ, ಕುಶಾಲ್ ಮೆಂಡಿಸ್ ಅರ್ಧಶತಕ
Photo- PTI
ಕೊಲಂಬೊ, ಸೆ.9: ಸದೀರ ಸಮರವಿಕ್ರಮ ಹಾಗೂ ಕುಶಾಲ್ ಮೆಂಡಿಸ್ ಅರ್ಧಶತಕಗಳ ಕೊಡುಗೆ, ದಸುನ್ ಶನಕ(3-28) , ಮಹೀಶ್ ತೀಕ್ಷ್ಣ(3-69)ಹಾಗೂ ಮಥೀಶ ಪಥಿರನ(3-58) ಕರಾರುವಾಕ್ ಬೌಲಿಂಗ್ ದಾಳಿಯ ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ತಂಡ ಬಾಂಗ್ಲಾದೇಶ ತಂಡದ ವಿರುದ್ಧ ಶನಿವಾರ ನಡೆದ ಏಶ್ಯಕಪ್ನ ಸೂಪರ್-4 ಪಂದ್ಯದಲ್ಲಿ 21 ರನ್ ಅಂತರದಿಂದ ಗೆಲುವು ಸಾಧಿಸಿದೆ.
ಗೆಲ್ಲಲು 258 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 48.1 ಓವರ್ಗಳಲ್ಲಿ 236 ರನ್ಗೆ ತನ್ನೆಲ್ಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಬಾಂಗ್ಲಾದ ಪರ ತೌಹಿದ್ ಹ್ರಿದಯ್ (82 ರನ್, 97 ಎಸೆತ, 7 ಬೌಂಡರಿ, 1 ಸಿ.)ಸರ್ವಾಧಿಕ ಸ್ಕೋರ್ ಗಳಿಸಿದರು. ಮುಶ್ಫಿಕುರ್ರಹೀಂ(29 ರನ್), ಮೆಹಿದಿ ಹಸನ್(28 ರನ್)ಹಾಗೂ ಮುಹಮ್ಮದ್ ನೈಮ್(21 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಶನಕ , ತೀಕ್ಷ್ಣ ಹಾಗೂ ಮಥೀಶ ಪಥಿರನ(2-58) ತಲಾ 3 ವಿಕೆಟ್ಗಳನ್ನು ಕಬಳಿಸಿದರು. ಡುನಿತ್ ವೆಲ್ಲಲಗೆ(1-26)ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ ಸಮರವಿಕ್ರಮ(93 ರನ್, 72 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಕುಶಾಲ್ ಮೆಂಡಿಸ್ (50 ರನ್, 73 ಎಸೆತ, 6 ಬೌಂಡರಿ, 1 ಸಿಕ್ಸರ್) ಸಾಂದರ್ಭಿಕ ಬ್ಯಾಟಿಂಗ್ನ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 257 ರನ್ ಗಳಿಸಲು ಶಕ್ತವಾಯಿತು.
ಆರಂಭಿಕ ಬ್ಯಾಟರ್ ಪಥುಮ್ ನಿಶಾಂಕ 60 ಎಸೆತಗಳಲ್ಲಿ 40 ರನ್(5 ಬೌಂಡರಿ) ನಾಯಕ ದಸುನ್ ಶನಕ 32 ಎಸೆತಗಳಲ್ಲಿ 24 ರನ್ ಕೊಡುಗೆ ನೀಡಿದರು.
ಮೆಂಡಿಸ್ ಹಾಗೂ ನಿಶಾಂಕ 2ನೇ ವಿಕೆಟ್ಗೆ 74 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಶ್ರೀಲಂಕಾ 37.1 ಓವರ್ಗಳಲ್ಲಿ 164 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು. ಆಗ 6ನೇ ವಿಕೆಟ್ಗೆ 60 ರನ್ ಸೇರಿಸಿದ ಶನಕ(24 ರನ್) ಹಾಗೂ ಸಮರವಿಕ್ರಮ(93 ರನ್) ತಂಡವನ್ನು ಆಧರಿಸಿದರು.
ಬಾಂಗ್ಲಾದೇಶದ ಬೌಲಿಂಗ್ ವಿಭಾಗದಲ್ಲಿ ಹಸನ್ ಮಹಮೂದ್(3-57) ಹಾಗೂ ತಸ್ಕಿನ್ ಅಹ್ಮದ್(3-62)ತಲಾ ಮೂರು ವಿಕೆಟ್ಗಳನ್ನು ಪಡೆದರು. ಶರೀಫುಲ್ ಇಸ್ಲಾಮ್ (2-48)ಎರಡು ವಿಕೆಟ್ ಪಡೆದು ಅಹ್ಮದ್ ಹಾಗೂ ಮಹಮೂದ್ಗೆ ಸಾಥ್ ನೀಡಿದರು.