ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ | ನಾಳೆ ಭಾರತ-ಪಾಕಿಸ್ತಾನ ಹಾಕಿ ತಂಡಗಳ ಮುಖಾಮುಖಿ
PC : PTI
ಬೀಜಿಂಗ್ : ಅಜೇಯ ಗೆಲುವಿನ ಓಟದಲ್ಲಿರುವ ಭಾರತದ ಪುರುಷರ ಹಾಕಿ ತಂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಶನಿವಾರ ತಾನಾಡಲಿರುವ ಕೊನೆಯ ಗ್ರೂಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಡ್ರ್ಯಾಗ್ ಫ್ಲಿಕರ್ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಸದ್ಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಹ್ಮದ್ ಬಟ್ ನಾಯಕತ್ವದ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಹಾಲಿ ಚಾಂಪಿಯನ್ ಭಾರತವು ಪಂದ್ಯಾವಳಿಯ ಫೇವರಿಟ್ ತಂಡವಾಗಿ ಹೊರಹೊಮ್ಮಿದ್ದು ಈ ತನಕ ಆಡಿರುವ ಎಲ್ಲ ನಾಲ್ಕೂ ಗ್ರೂಪ್ ಪಂದ್ಯಗಳನ್ನು ಗೆದ್ದುಕೊಂಡಿದೆ.
ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಚೀನಾವನ್ನು 3-0 ಅಂತರದಿಂದ ಮಣಿಸಿ ಶುಭಾರಂಭ ಮಾಡಿದ್ದ ಭಾರತ, 2ನೇ ಪಂದ್ಯದಲ್ಲಿ ಜಪಾನ್ ವಿರುದ್ಧ 5-1, 3ನೇ ಪಂದ್ಯದಲ್ಲಿ ಮಲೇಶ್ಯ ವಿರುದ್ಧ 8-1 ಹಾಗೂ 4ನೇ ಪಂದ್ಯದಲ್ಲಿ ಕೊರಿಯಾ ವಿರುದ್ಧ 3-1 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿದೆ.
ಭಾರತವು ಪಂದ್ಯಾವಳಿಯಲ್ಲಿ ಸೆಮಿ ಫೈನಲ್ಗೆ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.
ಮತ್ತೊಂದೆಡೆ ಪಾಕಿಸ್ತಾನ ತಂಡ ಗಮನಾರ್ಹ ಪ್ರದರ್ಶನ ನೀಡಿದೆ. ಮಲೇಶ್ಯ ಹಾಗೂ ಕೊರಿಯಾ ವಿರುದ್ಧ 2-2ರಿಂದ ಡ್ರಾ ಸಾಧಿಸಿರುವ ಪಾಕಿಸ್ತಾನ ತಂಡ ಜಪಾನ್ ತಂಡವನ್ನು 2-1 ಹಾಗೂ ಚೀನಾ ತಂಡವನ್ನು 5-1 ಅಂತರದಿಂದ ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
2013ರ ನಂತರ 25 ಪಂದ್ಯಗಳನ್ನು ಆಡಿರುವ ಉಭಯ ತಂಡಗಳ ಪೈಕಿ ಭಾರತವು 16 ಬಾರಿ ಜಯ ಸಾಧಿಸಿ ಮೇಲುಗೈ ಪಡೆದಿದೆ. ಪಾಕಿಸ್ತಾನ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ. 4 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
ಭಾರತವು ಏಶ್ಯನ್ ಗೇಮ್ಸ್ನಲ್ಲಿ ಪಾಕಿಸ್ತಾನ ತಂಡವನ್ನು ಕೊನೆಯ ಬಾರಿ ಮುಖಾಮುಖಯಾಗಿತ್ತು. ಎ ಗುಂಪಿನ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ತಂಡವನ್ನು 10-2 ಗೋಲುಗಳ ಅಂತರದಿಂದ ಮಣಿಸಿತ್ತು. ಇದು ಪಾಕಿಸ್ತಾನ ವಿರುದ್ಧ ಭಾರತ ಗಳಿಸಿರುವ ದೊಡ್ಡ ಅಂತರದ ಗೆಲುವಾಗಿದೆ. ಈ ತನಕ 180 ಬಾರಿ ಪಾಕಿಸ್ತಾನವನ್ನು ಎದುರಿಸಿರುವ ಭಾರತವು ಆಗ ಮೊದಲ ಬಾರಿ 7ಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿತ್ತು.