ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಮಲೇಷ್ಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಹೊಸದಿಲ್ಲಿ: ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾನುವಾರ 5-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ರೌಂಡ್‍ರಾಬಿನ್ ಪಂದ್ಯದಲ್ಲಿ ಆರಂಭದಿಂದಲೂ ಬಿಗಿ ಹಿಡಿತ ಸಾಧಿಸುವ ಮೂಲಕ ತನ್ನ ಪುನರಾಗಮನವನ್ನು ಭರ್ಜರಿಯಾಗಿ ಸಾರಿದೆ.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ತವರಿನ ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆ ತಂಡದ ಉತ್ಸಾಹ ಮುಗಿಲು ಮುಟ್ಟಿತ್ತು. ಸ್ಥಳೀಯ ಫೇವರಿಟ್ ಆಟಗಾರ ಕೀರ್ತಿ ಸೆಲ್ವಂ 15ನೇ ನಿಮಿಷದಲ್ಲೇ ಚೆಂಡನ್ನು ನೆಟ್ ಗೆ ಸೇರಿಸುವ ಮೂಲಕ ಆರಂಭಿಕ ಮುನ್ನಡೆ ಗಳಿಸಿಕೊಟ್ಟರು. 32ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸುವ ಮೂಲಕ ಉಪನಾಯಕ ಹಾರ್ದಿಕ್ ಸಿಂಗ್ ಭಾರತದ ಮುನ್ನಡೆ ಹಿಗ್ಗಿಸಿದರು.
ಇದಾದ ಹತ್ತು ನಿಮಿಷಗಳಲ್ಲಿ ನಾಯಕ ಹರ್ಮನ್‍ಪ್ರೀತ್‍ಸಿಂಗ್ ಇನ್ನೊಂದು ಗೋಲು ಗಳಿಸಿ ಭಾರತದ ಆಕ್ರಮಣಕಾರಿ ಆಟದ ರುಚಿ ತೋರಿಸಿದರು. ಗುರ್ಜಂತ್ ಸಿಂಗ್ 53ನೇ ನಿಮಿಷದಲ್ಲಿ ಹಾಗೂ ಜುಗ್‍ರಾಜ್ ಸಿಂಗ್ 54ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತದ ಭರ್ಜರಿ ಪ್ರದರ್ಶನಕ್ಕೆ ಕೊಡುಗೆ ನೀಡಿದರು.
ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಟೂರ್ನಿಯ ಸೆಮಿಫೈನಲ್‍ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. 18ನೇ ನಿಮಿಷದಲ್ಲಿ ಮಲೇಷ್ಯಾದ ಫಿರ್ತಿ ಸಾರಿ ಗ್ರೀನ್‍ಕಾರ್ಡ್ ಪಡೆದರು.