ಏಶ್ಯನ್ ಗೇಮ್ಸ್: ನಾಲ್ಕನೇ ದಿನ ಭಾರತಕ್ಕೆ 2 ಚಿನ್ನ, 3 ಬೆಳ್ಳಿ, 3 ಕಂಚು
Photo : PTI
ಹಾಂಗ್ಝೂ: ಚೀನಾದ ಹಾಂಗ್ಝೂನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ನ ನಾಲ್ಕನೇ ದಿನವಾದ ಬುಧವಾರ ಭಾರತೀಯ ಶೂಟರ್ಗಳು ಭವ್ಯ ಪ್ರದರ್ಶನ ನೀಡಿದರು. ಅವರು 2 ಚಿನ್ನ, 3 ಬೆಳ್ಳಿ ಮತ್ತು 2 ಕಂಚುಗಳನ್ನು ಗೆದ್ದರು. ಸೇಲಿಂಗ್ನಲ್ಲಿ ಒಂದು ಕಂಚು ಬಂದಿದೆ.
ಪುರುಷರ ಸ್ಕೀಟ್ನಲ್ಲಿ ಅನಂತ್ ಜೀತ್ ಸಿಂಗ್ಗೆ ಬೆಳ್ಳಿ:
ಏಶ್ಯನ್ ಗೇಮ್ಸ್ ನಲ್ಲಿ ಬುಧವಾರ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಭಾರತದ ಅನಂತ್ ಜೀತ್ ಸಿಂಗ್ ನರುಕ ಬೆಳ್ಳಿ ಪದಕ ಜಯಿಸಿದರು.
ಅತ್ಯುತ್ತಮ ನಿರ್ವಹಣೆ ನೀಡಿದ ಅನಂತ್ ಒಂದು ಹಂತದಲ್ಲಿ ಚಿನ್ನ ಗೆಲ್ಲುವ ಭರವಸೆಯನ್ನು ಹುಟ್ಟು ಹಾಕಿದರು. ಫೈನಲ್ ನ ಕೊನೆಯವರೆಗೂ ಅವರು ಒಂದೇ ಒಂದು ಗುರಿಯನ್ನು ತಪ್ಪಲಿಲ್ಲ. ಅವರು ತನ್ನ ಕೊನೆಯ ಸುತ್ತಿನಲ್ಲಿ 10/10 ಅಂಕ ಗಳಿಸಿದರು ಹಾಗೂ ಒಟ್ಟಾರೆ 60ರಲ್ಲಿ 58 ಅಂಕ ಗಳಿಸಿದರು. ಆದರೂ ಅದು ಚಿನ್ನ ಗೆಲ್ಲಲು ಸಾಕಾಗಲಿಲ್ಲ.
ಕುವೈತ್ ನ ಅಬ್ದುಲ್ಲಾ ಅಲ್ರಶೀದ್ 60ರಲ್ಲಿ 60 ಅಂಕಗಳನ್ನು ಗಳಿಸಿ ಚಿನ್ನ ಗೆದ್ದರು ಹಾಗೂ ಈ ಮೂಲಕ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಖತರ್ ನ ನಾಸಿರ್ ಅಲ್- ಅಟ್ಟಿಯ 46 ಅಂಕಗಳೊಂದಿಗೆ ಕಂಚು ಗೆದ್ದರು.
ಸ್ಕೀಟ್ ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು:
ಹಾಂಗ್ಝೂನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನಲ್ಲಿ, ಬುಧವಾರ ಪುರುಷರ ಸ್ಕೀಟ್ ಸ್ಪರ್ಧೆಯ ತಂಡ ವಿಭಾಗದಲ್ಲಿ ಭಾರತ ಕಂಚು ಗೆದ್ದಿದೆ. ಅಂಗದ್ ವೀರ್ ಸಿಂಗ್ ಬಾಜ್ವ, ಗುರ್ಜೋತ್ ಖಂಗುರ ಮತ್ತು ಅನಂತ್ ಜೀತ್ ಸಿಂಗ್ ನರುಕ ಅವರನ್ನೊಳಗೊಂಡ ತಂಡವು ಒಟ್ಟು 355 ಅಂಕಗಳನ್ನು ಗಳಿಸಿತು ಹಾಗೂ ಆ ಮೂಲಕ ಕಂಚಿನ ಪದಕಕ್ಕೆ ಅರ್ಹತೆ ಪಡೆಯಿತು.
ಈ ಸ್ಪರ್ಧೆಯ ಚಿನ್ನದ ಪದಕವನ್ನು ಆತಿಥೇಯ ಚೀನಾ ಗೆದ್ದಿತು ಹಾಗೂ ಬೆಳ್ಳಿಯನ್ನು ಖತರ್ ನ ತಂಡ ಪಡೆಯಿತು. ಮಹಿಳೆಯರ ಶಾಟ್ಗನ್ ಸ್ಕೀಟ್ ಸ್ಪರ್ಧೆಯಲ್ಲಿ, ಭಾರತೀಯ ತಂಡವು ಎದುರಾಳಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸಿ ನಾಲ್ಕನೇ ಸ್ಥಾನವನ್ನು ಪಡೆಯಿತು. ಖಝಖ್ಸ್ತಾನ, ಚೀನಾ ಮತ್ತು ಥಾಯ್ಲೆಂಡ್ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದವು.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.
ಮಹಿಳೆಯರ 25 ಮೀ ಪಿಸ್ತೂಲ್ - ಇಶಾ ಸಿಂಗ್ ಬೆಳ್ಳಿ:
ಹಾಂಗ್ಝೂನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ನಲ್ಲಿ, ಮಹಿಳೆಯರ ವೈಯಕ್ತಿಕ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಬುಧವಾರ ಭಾರತದ ಇಶಾ ಸಿಂಗ್ ಬೆಳ್ಳಿ ಪದಕ ಜಯಿಸಿದರು.
ಆದರೆ, ಯುವ ಒಲಿಂಪಿಕ್ಸ್ ಚಾಂಪಿಯನ್ ಮನು ಭಾಕರ್ಗೆ ಈ ಸ್ಪರ್ಧೆಯಲ್ಲಿ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. 18 ವರ್ಷದ ಇಶಾ ಅದ್ಭುತ ಪ್ರದರ್ಶನ ನೀಡಿ 34 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರು.
ಆತಿಥೇಯ ಚೀನಾದ ರುಯಿ ಲಿಯು 38 ಅಂಕಗಳೊಂದಿಗೆ ಕೂಟ ದಾಖಲೆಯನ್ನು ನಿರ್ಮಿಸಿ ಚಿನ್ನ ಗೆದ್ದರು. ದಕ್ಷಿಣ ಕೊರಿಯದ ಜೀನ್ ಯಾಂಗ್ 29 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು. ರುಯಿ ಲಿಯು ತನ್ನ ಚಿನ್ನದ ಪ್ರಯಾಣದಲ್ಲಿ ಭಾರತದ ರಾಹಿ ಸರ್ನೊಬಾತ್ರ 34 ಅಂಕಗಳ ದಾಖಲೆಯನ್ನು ಮುರಿದರು.
ಮನು ಭಾಕರ್ ಅರ್ಹತಾ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿ ಒಟ್ಟು 590 ಅಂಕಗಳನ್ನು ಗಳಿಸಿದ್ದರೂ, ಅಂತಿಮ ಸುತ್ತಿನಲ್ಲಿ 21 ಅಂಕಗಳನ್ನು ಗಳಿಸಿದ ಬಳಿಕ ಐದನೇ ಸ್ಥಾನಕ್ಕೆ ತೃಪ್ತರಾದರು.
ಸೇಲಿಂಗ್ ಡಿಂಗಿ ಐಎಲ್ಸಿಎ-7ರಲ್ಲಿ ಭಾರತಕ್ಕೆ ಕಂಚು:
ಭಾರತದ ಸೇಲರ್ ವಿಷ್ಣು ಸರವಣನ್ ಪುರುಷರ ಡಿಂಗಿ ಐಎಲ್ಸಿಎ-7 ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರು. ಇದು ಏಶ್ಯನ್ ಗೇಮ್ಸ್ನಲ್ಲಿ ಪುರುಷರ ಡಿಂಗಿ ಐಎಲ್ಸಿಎ-7 ಸ್ಪರ್ಧೆಯಲ್ಲಿ ಭಾರತದ ಮೊತ್ತ ಮೊದಲ ಪದಕವಾಗಿದೆ.
11 ರೇಸ್ಗಳ ಸ್ಪರ್ಧೆಯಲ್ಲಿ ಸರವಣನ್ 34 ಅಂಕಗಳನ್ನು ಗಳಿಸಿ ಕೇವಲ ಒಂದು ಅಂಕದಿಂದ ಬೆಳ್ಳಿ ಪದಕದಿಂದ ವಂಚಿತರಾದರು. ದಕ್ಷಿಣ ಕೊರಿಯದ ಜೀಮಿನ್ ಎಚ್ಎ 33 ಅಂಕಗಳನ್ನು ಗಳಿಸಿ ಬೆಳ್ಳಿ ಪಡೆದರು. ಸಿಂಗಾಪುರದ ಜೂನ್ ಹಾನ್ ರಯಾನ್ ಲೊ 36 ಅಂಕಗಳೊಂದಿಗೆ ಚಿನ್ನ ಗೆದ್ದರು.
ಅದೇ ವೇಳೆ, ಗಾಳಿಯ ಕೊರತೆಯು ಮಹಿಳೆಯರ ಸಿಂಗಲ್ ಡಿಂಗಿ ಐಎಲ್ಸಿಎ-6 ಸ್ಪರ್ಧೆಯಲ್ಲಿ ಭಾರತಕ್ಕೆ ಪದಕವನ್ನು ನಿರಾಕರಿಸಿತು. ನೇತ್ರಾ ಕುಮಾರನ್ ನಿರಾಶಾದಾಯಕ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಈ ಏಶ್ಯನ್ ಗೇಮ್ಸ್ನಲ್ಲಿ ಭಾರತೀಯ ಸೇಲರ್ಗಳು 2018ರ ಏಶ್ಯನ್ ಗೇಮ್ಸ್ನ ಸಾಧನೆಯನ್ನು ಪುನರಾವರ್ತಿಸಿದರು. ಅಂದಿನ ಏಶ್ಯನ್ ಗೇಮ್ಸ್ನಲ್ಲಿ ಭಾರತ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಜಯಿಸಿತ್ತು.
ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಶನ್ ಸ್ಪರ್ಧೆ - ಸಿಫ್ಟ್ ಕೌರ್ ಗೆ ದಾಖಲೆಯೊಂದಿಗೆ ಚಿನ್ನ, ಆಶಿ ಚೋಕ್ಸಿಗೆ ಕಂಚು:
ಭಾರತದ ಯುವ ಶೂಟರ್ ಸಿಫ್ಟ್ ಕೌರ್ ಸಾಮ್ರಾ ಮಹಿಳೆಯರ ವೈಯಕ್ತಿಕ 50 ಮೀಟರ್ ರೈಫಲ್ 3 ಪೊಸಿಶನ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.
ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ಭಾರತದ ಆಶಿ ಚೋಕ್ಸಿ 451.9 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿ ಪಡೆದಿದ್ದಾರೆ. ಚೀನಾದ ಕಿಯೊಂಗ್ಯೂ ಝಾಂಗ್ 462.3 ಅಂಕಗಳೊಂದಿಗೆ ಬೆಳ್ಳಿ ಗೆದ್ದರು.
ಸಾಮ್ರಾ ಅತ್ಯುನ್ನತ ನಿರ್ವಹಣೆಯನ್ನು ದಾಖಲಿಸಿ ಚಿನ್ನದ ಪದಕವನ್ನು ಬಾಚಿಕೊಂಡರು. ಅವರು 469.6 ಅಂಕಗಳನ್ನು ಗಳಿಸಿದರು. ಇದು ವಿಶ್ವ ಮತ್ತು ಕೂಟ ದಾಖಲೆಯಾಗಿದೆ.
ಫೈನಲ್ನಲ್ಲಿ ವಿಜಯ ಸಂಪಾದಿಸುವ ಮುನ್ನ, ಸಿಫ್ಟ್ ಕೌರ್ ಸಾಮ್ರಾ ಅರ್ಹತಾ ಸುತ್ತಿನಲ್ಲಿ, 600 ಅಂಕಗಳ ಪೈಕಿ 594 ಅಂಕ ಗಳಿಸಿ ನೂತನ ಏಶ್ಯನ್ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು. ಅಶಿ ಚೋಕ್ಸಿ ಕೂಡ ಅರ್ಹತಾ ಸುತ್ತಿನಲ್ಲಿ 590 ಅಂಕಗಳನ್ನು ಗಳಿಸಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅವರು ಆರನೇ ಸ್ಥಾನದಲ್ಲಿ ಫೈನಲ್ಗೆ ಅರ್ಹತೆ ಪಡೆದರು.