107 ಪದಕಗಳೊಂದಿಗೆ ಏಶ್ಯನ್ ಗೇಮ್ಸ್ ಅಭಿಯಾನ ಅಂತ್ಯಗೊಳಿಸಿದ ಭಾರತ
ಹ್ಯಾಂಗ್ ಝೌ : ಭಾರತ ತಂಡವು 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚು ಸಹಿತ ಒಟ್ಟು 107 ಪದಕಗಳೊಂದಿಗೆ 19ನೇ ಆವೃತ್ತಿಯ ಏಶ್ಯನ್ ಗೇಮ್ಸ್ ನಲ್ಲಿ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಅಂತ್ಯಗೊಳಿಸಿದೆ. 4 ದಶಕಗಳ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿ 100ಕ್ಕೂ ಅಧಿಕ ಪದಕಗಳನ್ನು ಬಾಚಿಕೊಂಡಿದೆ. ಶನಿವಾರ 100 ಪದಕಗಳ ಗುರಿಯನ್ನು ಮುಟ್ಟುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಭಾರತವು ಪುರುಷರ ಹಾಗೂ ಮಹಿಳೆಯರ ಕಬಡ್ಡಿಯಲ್ಲಿ, ಆರ್ಚರಿಯಲ್ಲಿ (ಕಾಂಪೌಂಡ್ ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ ಸ್ಪರ್ಧೆ) ಅವಳಿ ಚಿನ್ನ ಪುರುಷರ ಟಿ-20 ಕ್ರಿಕೆಟ್ , ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಬಂಗಾರ ಗೆದ್ದುಕೊಂಡಿತು.
ಈ ಮೂಲಕ ಭಾರತವು ಒಂದೇ ದಿನ 6 ಚಿನ್ನದ ಪದಕಗಳನ್ನು ಬಾಚಿಕೊಂಡಿದೆ. ಆರ್ಚರಿ, ಕುಸ್ತಿ ಹಾಗೂ ಚೆಸ್(ಪುರುಷರು, ಮಹಿಳೆಯರ ವಿಭಾಗ)ನಲ್ಲಿ ಬೆಳ್ಳಿ ಪದಕ ಜಯಿಸಿತು. ಮಹಿಳೆಯರ ಹಾಕಿ ಹಾಗೂ ಆರ್ಚರಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಕಂಚು ಜಯಿಸಿದೆ. ಶನಿವಾರ ಒಂದೇ ದಿನ 6 ಚಿನ್ನ, 4 ಬೆಳ್ಳಿ ಹಾಗೂ 2 ಕಂಚು ಸಹಿತ ಒಟ್ಟು 12 ಪದಕಗಳನ್ನು ಗೆದ್ದುಕೊಂಡಿದೆ.
ಬಂಗಾರದ ಬೇಟೆಯಲ್ಲಿ ಹ್ಯಾಟ್ರಿಕ್ ಸಾಧಿಸಿದ ಜ್ಯೋತಿ ಸುರೇಖಾ, ಓಜಾಸ್ ಪ್ರವೀಣ್
ಹ್ಯಾಂಗ್ ಝೌ: ಬಿಲ್ಲು ಹಾಗೂ ಬಾಣ ತಮಗೆ ಇಷ್ಟವಾಗುವ ಮೊದಲು ಜ್ಯೋತಿ ಸುರೇಖಾ ವೆನ್ನಂ ಆಂಧ್ರಪ್ರದೇಶದ ಜಿಲ್ಲಾಧಿಕಾರಿಯಾಗಿದ್ದರು. ಓಜಾಸ್ ಪ್ರವೀಣ್ ದೇವತಾಳೆ ರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ಸ್ ಆಗಿ ಬೆಳ್ಳಿ ಪದಕ ಜಯಿಸಿದ್ದರು. ಇದೀಗ ಇಬ್ಬರೂ ಏಶ್ಯನ್ ಗೇಮ್ಸ್ ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕವನ್ನು ಜಯಿಸಿ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.
ಶನಿವಾರ ಕೊನೆಯ ದಿನದ ಸ್ಪರ್ಧಾವಳಿಯಲ್ಲಿ ಸುರೇಖಾ ಹಾಗೂ ಓಜಾಸ್ ಆರ್ಚರಿಯಲ್ಲಿ ಕ್ರಮವಾಗಿ ಕಾಂಪೌಂಡ್ ಮಹಿಳೆಯರ ಹಾಗೂ ಪುರುಷರ ಫೈನಲ್ ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟರು.
21ರ ವಯಸ್ಸಿನ ಓಜಾಸ್ ದೇವತಾಳೆ ತಮ್ಮದೇ ದೇಶದ, ತಮ್ಮ ಸಲಹೆಗಾರ ಅಭಿಷೇಕ್ ವರ್ಮಾರನ್ನು ಕಾಂಪೌಂಡ್ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಸೋಲಿಸಿದರು. ಸ್ಪರ್ಧೆಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿರುವ ಓಜಾಸ್ ಕ್ವಾರ್ಟರ್ಫೈನಲ್ ಹಾಗೂ ಸೆಮಿ ಫೈನಲ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು.
ಶನಿವಾರದ ಪಂದ್ಯಕ್ಕಿಂತ ಮೊದಲು ಓಜಾಸ್ ಅವರು ರಜತ್ ಚೌಹಾಣ್, ಪ್ರಥಮೇಶ್ ಜಾವ್ಕರ್ ಹಾಗೂ ಅಭಿಷೇಕ್ ವರ್ಮಾ ಜೊತೆಗೂಡಿ ಕಾಂಪೌಂಡ್ ಪುರುಷರ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇಷ್ಟೇ ಅಲ್ಲದೆ ಜ್ಯೋತಿ ಅವರೊಂದಿಗೆ ಮಿಶ್ರ ಟೀಮ್ ಸ್ಫರ್ಧೆಯಲ್ಲಿ ಸ್ವರ್ಣ ಗೆದ್ದುಕೊಂಡಿದ್ದರು.
ಮಾಜಿ ಶೂಟರ್ನ ಪುತ್ರನಾಗಿರುವ ಓಜಾಸ್ ಮೊದಲಿಗೆ ಸ್ಕೇಟಿಂಗ್, ನಂತರ ಜಿಮ್ನಾಸ್ಟಿಕ್ಸ್ ಹಾಗೂ ಅಂತಿಮವಾಗಿ ಆರ್ಚರಿಯಲ್ಲಿ ತನ್ನ ಆಸಕ್ತಿಯನ್ನು ಬೆಳೆಸಿಕೊಂಡರು.
27ರ ಹರೆಯದ ಆಂಧ್ರಪ್ರದೇಶದ ಜಿಲ್ಲಾಧಿಕಾರಿ, ಎಂಬಿಎ ಹಾಗೂ ಇಂಜಿನಿಯರ್ ಪದವೀಧರೆ ಆಗಿರುವ ಸುರೇಖಾ ಒಂದೊಮ್ಮೆ ಕ್ರೀಡೆಗೆ ವಿದಾಯ ಹೇಳಲು ಯೋಚಿಸಿದ್ದರು.ತಂದೆ-ತಾಯಿಯ ಒತಾಯದ ಮೇರೆಗೆ ಈ ವರ್ಷ ಕ್ರೀಡೆಗೆ ಮರಳಿದ್ದರು. ಏಶ್ಯನ್ ಗೇಮ್ಸ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಮೂರನೇ ಬಾರಿ ಏಶ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿದ್ದು ಈ ಬಾರಿ ಮೊದಲ ಸಲ ಚಿನ್ನಕ್ಕೆ ಗುರಿ ಇಟ್ಟರು. ಆನಂತರ ಇನ್ನೆರಡು ಚಿನ್ನ ಗೆದ್ದುಕೊಂಡು ಹ್ಯಾಟ್ರಿಕ್ ಸಾಧಿಸಿದರು.
ಶನಿವಾರ ಕಾಂಪೌಂಡ್ ಮಹಿಳೆಯರ ವೈಯಕ್ತಿಕ ಫೈನಲ್ ನಲ್ಲಿ ವಿಶ್ವದ ನಂ.4ನೇ ಆಟಗಾರ್ತಿ ಸುರೇಖಾ ದಕ್ಷಿಣ ಕೊರಿಯಾದ ಚೆನ್ ಸೋ ಅವರನ್ನು 149-145 ಅಂತರದಿಂದ ಸೋಲಿಸಿದರು. ಅದಿತಿ ಸ್ವಾಮಿ ಕಂಚಿನ ಪದಕ ಜಯಿಸಿದರು. ಮಹಿಳೆಯರ ಹಾಗೂ ಮಿಕ್ಸೆಡ್ ಟೀಮ್ ಸ್ಪರ್ಧೆಗಳಲ್ಲಿ ಸುರೇಖಾ ಈಗಾಗಲೇ ಚಿನ್ನ ಜಯಿಸಿದ್ದಾರೆ.
ಭಾರತದ ಕಿರಿಯ, ಹಿರಿಯ ಪದಕ ವಿಜೇತರ ನಡುವೆ 50 ವರ್ಷ ಅಂತರ
ಹ್ಯಾಂಗ್ ಝೌ: ಏಶ್ಯನ್ ಗೇಮ್ಸ್ ನಲ್ಲಿ ಭಾರತದ ಕಿರಿಯ ಹಾಗೂ ಹಿರಿಯ ವಯಸ್ಸಿನ ಪದಕ ವಿಜೇತರ ನಡುವೆ 50 ವರ್ಷಗಳ ಅಂತರವಿದ್ದು, ವಯಸ್ಸು ಕೇವಲ ನಂಬರ್ ಅಷ್ಟೇ ಎಂದು ಬ್ರಿಡ್ಜ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತ 65ರ ವಯಸ್ಸಿನ ಜಗ್ಗಿ ಶಿವದಾಸನಿ ಸಾಬೀತುಪಡಿಸಿದ್ದಾರೆ.
ರೋಲರ್ ಸ್ಕೇಟಿಂಗ್ನಲ್ಲಿ ಕಂಚು ವಿಜೇತೆ ಸಂಜನಾ ಹಾಗೂ ಡಬಲ್ ಸ್ಕ್ವಾಷ್ನಲ್ಲಿ ಕಂಚು ವಿಜೇತೆ ಅನಾಹತ್ ಸಿಂಗ್ ಇಬ್ಬರ ವಯಸ್ಸು 15. ಜಗ್ಗಿ ಹಾಗೂ ಸಂಜನಾ-ಅನಾಹತ್ ಅವರ ವಯಸ್ಸಿನ ಅಂತರ ಒಂದು ಪೀಳಿಗೆಯಷ್ಟಿದೆ.
2018ರ ಗೇಮ್ಸ್ ನಲ್ಲಿ ಕಂಚು ಜಯಿಸಿದ್ದ ಶಿವದಾಸನಿ ಇದೀಗ 2ನೇ ಬಾರಿ ಗೇಮ್ಸ್ ನಲ್ಲಿ ಪದಕ ಜಯಿಸಿದ್ದರು.
ಮಹಿಳೆಯರ ಹಾಕಿ: ಜಪಾನ್ ವಿರುದ್ಧ ಜಯ; ಭಾರತಕ್ಕೆ ಕಂಚು
ಹಾಂಗ್ ಝೌ: ಫೇವರಿಟ್ ಹಣೆಪಟ್ಟಿಯೊಂದಿಗೆ ಟೂರ್ನಮೆಂಟ್ ಪ್ರವೇಶಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡವು ಸೆಮಿ ಫೈನಲ್ ನಲ್ಲಿ ಅನಿರೀಕ್ಷಿತ ಹಿನ್ನಡೆ ಎದುರಿಸಿತ್ತು. ಆದರೆ ಶನಿವಾರ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ 2-1 ಅಂತರದಿಂದ ಜಯ ಶಾಲಿಯಾಗಿ ಪ್ರತಿಹೋರಾಟ ನೀಡಿರುವ ಭಾರತವು ಕಂಚಿನ ಪದಕ ಜಯಿಸಿದೆ.
ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನ ರೋಚಕ ಜಯ ಸಾಧಿಸದಿದ ಮಹಿಳಾ ಕಬಡ್ಡಿ ತಂಡಕ್ಕೆ ಸ್ವರ್ಣ ಸಂಭ್ರಮ
ಹಾಂಗ್ ಝೌ: ಏಶ್ಯನ್ ಗೇಮ್ಸ್ ಫೈನಲ್ ನಲ್ಲಿ ಚೈನೀಸ್ ತೈಪೆ ತಂಡವನ್ನು 26-25 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿದ ಭಾರತದ ಮಹಿಳಾ ಹಾಕಿ ತಂಡ ಚಿನ್ನದ ಪದಕ ಜಯಿಸಿದೆ.
ಪೂರ್ಣಾವಧಿ ಮುಗಿದಾಗ ರೆಫರಿ ಅಂತಿಮ ಶೀಟಿ ಊದಿದ ತಕ್ಷಣ ಭಾರತೀಯ ಆಟಗಾರ್ತಿಯರು ಭಾವುಕರಾಗಿ ಕಣ್ಣೀರಿಟ್ಟಿದ್ದು ಪರಸ್ಪರ ತಬ್ಬಿಕೊಂಡರು. ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದರು.
2010ರ ಏಶ್ಯನ್ ಗೇಮ್ಸ್ ನಲ್ಲಿ ಪರಿಚಯಿಸಲ್ಪಟ್ಟ ಮಹಿಳೆಯರ ಕಬಡ್ಡಿ ಸ್ಪರ್ಧೆಯಲ್ಲಿ ಭಾರತವು ಮೂರನೇ ಬಾರಿ ಚಿನ್ನದ ಪದಕ ಜಯಿಸಿದೆ. 2018ರ ಆವೃತ್ತಿಯ ಫೈನಲ್ ನಲ್ಲಿ ಇರಾನ್ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕ ಜಯಿಸುವ ಮೊದಲು 2010 ಹಾಗೂ 2014ರ ಆವೃತ್ತಿಗಳಲ್ಲಿ ಚಿನ್ನ ಜಯಿಸಿತ್ತು.
ಉಭಯ ತಂಡಗಳು ಗ್ರೂಪ್ ಹಂತದ ಪಂದ್ಯದಲ್ಲಿ 34-34ರಿಂದ ಟೈ ಮಾಡಿದ್ದವು. ಹೀಗಾಗಿ ಫೈನಲ್ ಪಂದ್ಯ ಕಠಿಣವಾಗಬಹುದು ಎಂದು ಎರಡೂ ತಂಡಕ್ಕೆ ಅರಿವಿತ್ತು. ಪೂಜಾ ಅವರ ಸೂಪರ್ ರೈಡ್ ನೆರವಿನಿಂದ ಭಾರತವು ಮೊದಲಾರ್ಧದಲ್ಲಿ 14-9ರಿಂದ ಮುನ್ನಡೆ ಸಾಧಿಸಿತು.
ಭಾರತದ ಪುರುಷರ, ಮಹಿಳೆಯರ ಚೆಸ್ ತಂಡಕ್ಕೆ ಬೆಳ್ಳಿ ಪದಕ
ಹಾಂಗ್ ಝೌ: ಭಾರತದ ಪುರುಷರ ಹಾಗೂ ಮಹಿಳೆಯರ ಚೆಸ್ ತಂಡಗಳು ಏಶ್ಯನ್ ಗೇಮ್ಸ್ ನಲ್ಲಿ ಶನಿವಾರ ಬೆಳ್ಳಿ ಪದಕಗಳನ್ನು ಜಯಿಸಿದವು.
ಐಎಂ ವೈಶಾಲಿ ರಮೇಶ್ಬಾಬು, ಐಎಂ ವಂಟಿಕಾ ಅಗರ್ವಾಲ್ ಹಾಗೂ ಡಬ್ಲ್ಯುಜಿಎಂ ಸವಿತಾ ಶ್ರೀ ಭಾಸ್ಕರ್ ಅಂತಿಮ ಸುತ್ತಿನಲ್ಲಿ ದಕ್ಷಿಣ ಕೊರಿಯಾವನ್ನು 4-0 ಅಂತರದಿಂದ ಮಣಿಸಿ ಒಟ್ಟು 15 ಅಂಕ ಗಳಿಸಿದರು. ಅಗ್ರ ಶ್ರೇಯಾಂಕದ ಚೀನಾದ ತಂಡ ಯುಎಇ ವಿರುದ್ಧ ಅಂತಿಮ ಪಂದ್ಯವನ್ನು 4-0 ಅಂತರದಿಂದ ಗೆದ್ದುಕೊಂಡಿತು. 17/18 ಅಂಕದಿಂದ ಚಿನ್ನ ತನ್ನದಾಗಿಸಿಕೊಂಡಿತು.
ಫಿಲಿಪ್ಪೀನ್ಸ್ ವಿರುದ್ಧ ಜಯಸಾಧಿಸಿದ ಭಾರತದ ಪುರುಷರ ತಂಡ 3.5-0.5ರಿಂದ ತಮ್ಮ ಅಭಿಯಾನ ಮುಗಿಸಿದರು.
ಅಗ್ರ ಶ್ರೇಯಾಂಕದ ಅರ್ಜುನ್ ಎರಿಗಸಿ, ಡಿ.ಗುಕೇಶ್, ವಿದಿತ್ ಗುಜ್ರಾತಿ ಹಾಗೂ ಹರಿಕೃಷ್ಣ ಪೆಂಟಾಲಾ ಅವರು ಫಿಲಿಪ್ಪೀನ್ಸ್ ವಿರುದ್ಧದ ತಮ್ಮ ಎಲ್ಲ ಪಂದ್ಯಗಳನ್ನು ಗೆದ್ದರು. ಆರ್.ಪ್ರಜ್ಞಾನಂದ ತನ್ನ ಗೇಮ್ ನ ಡ್ರಾ ಮಾಡಿಕೊಂಡು ಚಿನ್ನ ವಿಜೇತ ಇರಾನ್ ನಂತರ 2ನೇ ಸ್ಥಾನ ಪಡೆದರು.
ದೀಪಕ್ ಪುನಿಯಾಗೆ ಬೆಳ್ಳಿ, ಆರು ಪದಕ ಗೆದ್ದ ಕುಸ್ತಿಪಟುಗಳು
ಹಾಂಗ್ ಝೌ: ಏಶ್ಯನ್ ಗೇಮ್ಸ್ ನಲ್ಲಿ ಪುರುಷರ 86 ಕೆಜಿ ವಿಭಾಗದಲ್ಲಿ ಇರಾನ್ನ ಲೆಜೆಂಡ್ ಹಸನ್ ಯಾಝ್ದಾನಿ ವಿರುದ್ಧ ತಾಂತ್ರಿಕ ಶ್ರೇಷ್ಠತೆಯಲ್ಲಿ ಸೋಲುಂಡಿರುವ ಭಾರತದ ದೀಪಕ್ ಪುನಿಯಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಈ ಮೂಲಕ ಭಾರತವು ಕ್ರೀಡಾಕೂಟದಲ್ಲಿ ಒಂದೂ ಚಿನ್ನ ಗೆಲ್ಲದೆ ಒಟ್ಟು ಆರು ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಇದೇ ವೇಳೆ ಯಶ್ ಟುನಿರ್(74ಕೆಜಿ), ವಿಕಿ(97ಕೆಜಿ) ಹಾಗೂ ಸುಮಿತ್ ಮಲಿಕ್(125 ಕೆಜಿ)ಪದಕ ಸುತ್ತಿಗೆ ತಲುಪದೆ ಮ್ ನಿಂದ ನಿರ್ಗಮಿಸಿದರು.
ಒಟ್ಟಾರೆ ಕುಸ್ತಿಯಲ್ಲಿ ಭಾರತವು ಆರು ಪದಕಗಳನ್ನು ಜಯಿಸಿದ್ದು ಶುಕ್ರವಾರ ಬಜರಂಗ್ ಪುನಿಯಾ ಸೋತಿರುವುದು ದೊಡ್ಡ ಹಿನ್ನಡೆಯಾಗಿದೆ. ಸುನೀಲ್ ಕುಮಾರ್(87ಕೆಜಿ), ಅಂತಿಮ್ ಪಾಂಘಾಲ್(53ಕೆಜಿ), ಸೋನಮ್ ಮಲಿಕ್(62ಕೆಜಿ) ಅಮನ್ ಸೆಹ್ರಾವತ್(57ಕೆಜಿ) ಹಾಗೂ ಕಿರಣ್ ಬಿಶ್ನೋಯ್(76ಕೆಜಿ) ಭಾರತದ ಪರ ಪದಕ ಗೆದ್ದಿರುವ ಕುಸ್ತಿಪಟುಗಳಾಗಿದ್ದಾರೆ.