ಜಪಾನ್ ಸೋಲಿಸಿ ಹಾಕಿಯಲ್ಲಿ ಚಿನ್ನದ ಪದಕ ಗೆದ್ದ ಭಾರತ
ಏಶ್ಯನ್ ಗೇಮ್ಸ್: 5-1 ಗೋಲ್ ಮುನ್ನಡೆಯೊಂದಿಗೆ ಒಲಿಂಪಿಕ್ಸ್ ಗೆ ಅರ್ಹತೆ
Photo : olympics.com
ಹೊಸದಿಲ್ಲಿ : ನಾಯಕ ಹರ್ಮನ್ಪ್ರೀತ್ ಸಿಂಗ್ ನೇತೃತ್ವದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಪುರುಷರ ಹಾಕಿ ತಂಡ ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 5-1 ಅಂತರದಿಂದ ಮಣಿಸಿ ನಾಲ್ಕನೇ ಬಾರಿ ಏಶ್ಯನ್ ಗೇಮ್ಸ್ ನ ಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
9 ವರ್ಷಗಳ ನಂತರ ಏಶ್ಯನ್ ಗೇಮ್ಸ್ ನ ಲ್ಲಿ ಚಿನ್ನಕ್ಕೆ ಮುತ್ತಿಟ್ಟ ಭಾರತವು ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿಯೂ ಯಶಸ್ವಿಯಾಯಿತು.
ಜಕಾರ್ತದಲ್ಲಿ 2018ರಲ್ಲಿ ನಡೆದಿದ್ದ ಗೇಮ್ಸ್ ನ ಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದ ಭಾರತವು 2014ರ ಇಂಚಿಯೋನ್ ಗೇಮ್ಸ್ ನಂತರ ಮೊದಲ ಹಾಗೂ ಒಟ್ಟಾರೆ 4ನೇ ಬಾರಿ ಚಿನ್ನದ ಪದಕ ಬಾಚಿಕೊಂಡಿದೆ. ಭಾರತವು 1966 ಹಾಗೂ 1998ರಲ್ಲಿ ಬ್ಯಾಂಕಾಕ್ನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ ನ ಲ್ಲಿ ಚಿನ್ನದ ಪದಕ ಜಯಿಸಿತ್ತು.
ಆತಿಥೇಯ ಚೀನಾವನ್ನು 2-1 ಅಂತರದಿಂದ ಮಣಿಸಿದ ದಕ್ಷಿಣ ಕೊರಿಯಾ ಕಂಚಿನ ಪದಕ ಜಯಿಸಿದೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ನಾಯಕ ಹರ್ಮನ್ಪ್ರೀತ್ ಪೆನಾಲ್ಟಿ ಕಾರ್ನರ್ಗಳ ಮೂಲಕ 32ನೇ ಹಾಗೂ 59ನೇ ನಿಮಿಷದಲ್ಲಿ ಅವಳಿ ಗೋಲುಗಳನ್ನು ಗಳಿಸಿದರು. ಅಮಿತ್ ರೋಹಿದಾಸ್(36ನೆ ನಿಮಿಷ), ಮನ್ಪ್ರೀತ್ ಸಿಂಗ್(25ನೇ ನಿಮಿಷ) ಹಾಗೂ ಅಭಿಷೇಕ್(48ನೇ ನಿಮಿಷ)ತಲಾ ಒಂದು ಫೀಲ್ಡ್ ಗೋಲುಗಳನ್ನು ದಾಖಲಿಸಿ ತಂಡದ ಗೆಲುವಿಗೆ ನೆರವಾದರು.
ಜಪಾನ್ ಪರ ಸೆರೆನ್ ಟನಕ 51ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದರು.
ಹರ್ಮನ್ಪ್ರೀತ್ ಒಟ್ಟು 13 ಗೋಲುಗಳನ್ನು ಗಳಿಸಿ ಟೂರ್ನಮೆಂಟ್ನಲ್ಲಿ ಭಾರತದ ಪರ ಗರಿಷ್ಠ ಗೋಲು ಗಳಿಸಿದ ಸಾಧನೆ ಮಾಡಿದರು.ಮನ್ದೀಪ್ ಸಿಂಗ್ 12 ಗೋಲು ಗಳಿಸಿ ಗಮನ ಸೆಳೆದರು.
ಭಾರತದ ಹಾಕಿ ತಂಡ ಟೂರ್ನಮೆಂಟ್ನಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿತು. ಜಪಾನ್ ತಂಡವನ್ನು ಲೀಗ್ ಹಂತದಲ್ಲಿ 4-2 ಅಂತರದಿಂದ ಮಣಿಸಿದ್ದ ಭಾರತ ಮತ್ತೊಂದು ಗೆಲುವು ದಾಖಲಿಸಿತು.