ಏಶ್ಯನ್ ಗೇಮ್ಸ್: ಕಾಂಬೋಡಿಯಾವನ್ನು ಮಣಿಸಿದ ಭಾರತದ ವಾಲಿಬಾಲ್ ತಂಡ
ಫೋಟೊ ಕೃಪೆ : sportstar.thehindu
ಹೊಸದಿಲ್ಲಿ : ಏಶ್ಯನ್ ಗೇಮ್ಸ್ ನಲ್ಲಿ ಮಂಗಳವಾರ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತೀಯ ಪುರುಷರ ವಾಲಿಬಾಲ್ ತಂಡವು ಕಾಂಬೋಡಿಯಾ ತಂಡದ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿ ಅಮೋಘ ಪ್ರದರ್ಶನ ನೀಡಿದೆ.
ಗ್ರೂಪ್ ಸಿ ಹಣಾಹಣಿಯಲ್ಲಿ ಭಾರತೀಯ ತಂಡವು ಕೆಳ ರ್ಯಾಂಕಿನ ಕಾಂಬೋಡಿಯಾ ತಂಡವನ್ನು 25-14, 25-13, 25-19 ಅಂತರದಿಂದ ಮಣಿಸಿದೆ. ಭಾರತಕ್ಕೆ ಬುಧವಾರ ಕಠಿಣ ಸವಾಲು ಎದುರಾಗಲಿದೆ. ಗ್ರೂಪ್ ಸಿಯಲ್ಲಿರುವ ವಿಶ್ವದ ನಂ.27ನೇ ತಂಡ ದಕ್ಷಿಣ ಕೊರಿಯಾ ತಂಡವನ್ನು ಭಾರತ ಎದುರಿಸಲಿದೆ.
ಹಾಂಗ್ ಝೌ ಗೇಮ್ಸ್ ನಲ್ಲಿ ಪುರುಷರ ವಾಲಿವಾಲ್ ನಲ್ಲಿ ಒಟ್ಟು 19 ತಂಡಗಳು ಭಾಗವಹಿಸುತ್ತಿವೆ. ಜಪಾನ್, ಚೀನಾ ಹಾಗೂ ದಕ್ಷಿಣ ಕೊರಿಯಾ ಸ್ಪರ್ಧಾವಳಿಯಲ್ಲಿರುವ ಮೂರು ಪ್ರಮುಖ ತಂಡಗಳೆಂದು ಪರಿಗಣಿಸಲ್ಪಟ್ಟಿವೆ. ಏಶ್ಯನ್ ಗೇಮ್ಸ್ ನಲ್ಲಿ ಪುರುಷರ ವಾಲಿಬಾಲ್ ನಲ್ಲಿ ಜಪಾನ್ 16 ಚಿನ್ನದ ಪದಕ ಜಯಿಸಿದೆ. ಚೀನಾ 11 ಚಿನ್ನ ಹಾಗೂ ಕೊರಿಯಾ 5 ಬಾರಿ ಚಿನ್ನದ ಪದಕ ಜಯಿಸಿದೆ.
ಭಾರತದ ಪುರುಷರ ವಾಲಿಬಾಲ್ ತಂಡ ಈ ತನಕ 3 ಪದಕಗಳನ್ನು ಜಯಿಸಿದ್ದು, 1962ರಲ್ಲಿ ರನ್ನರ್ಸ್ ಅಪ್ ಎನಿಸಿಕೊಂಡು ಶ್ರೇಷ್ಠ ಪ್ರದರ್ಶನ ನೀಡಿದೆ. 1958 ಹಾಗೂ 1986ರಲ್ಲಿ ಕಂಚಿನ ಪದಕಗಳನ್ನು ಜಯಿಸಿದೆ. ಏಶ್ಯನ್ ಗೇಮ್ಸ್ ಅಧಿಕೃತವಾಗಿ ಸೆಪ್ಟಂಬರ್ 23ರಿಂದ ಆರಂಭವಾಗಲಿದೆ.