ಏಶ್ಯನ್ ಗೇಮ್ಸ್: ನೇಪಾಳದ ವಿರುದ್ಧ ಸುಲಭ ಜಯ ಸಾಧಿಸಿದ ಭಾರತೀಯ ಮಹಿಳಾ ಟೇಬಲ್ ಟೆನಿಸ್ ಪಟುಗಳು
Photo: Twitter
ಹಾಂಗ್ ಝೌ: ಏಶ್ಯನ್ ಗೇಮ್ಸ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದಲ್ಲಿ ಶನಿವಾರ ಭಾರತೀಯ ಮಹಿಳಾ ಪಟುಗಳಾದ ದಿಯಾ ಪರಾಗ್ ಚಿತಾಲೆ, ಆಯ್ಹಿಕಾ ಮುಖರ್ಜಿ ಹಾಗೂ ಸುತೀರ್ಥ ಮುಖರ್ಜಿ ನೇಪಾಳ ತಂಡದ ವಿರುದ್ಧ 3-0 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದರು. ಇದರೊಂದಿಗೆ ಏಶ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಶುಭಾರಂಭ ದೊರಕಿಸಿಕೊಟ್ಟರು.
ಮೊದಲಿಗೆ ಭಾರತದ ದಿಯಾ ನೇಪಾಳದ ಸಿಕ್ಕಾ ಶ್ರೇಷ್ಠ ವಿರುದ್ಧ ಗೆಲುವು ದಾಖಲಿಸಿದರು. ಅಭಿಮಾನಿಗಳು ಕಣ್ಣು ಮಿಟುಕಿಸಿ ತೆರೆಯುವುದರೊಳಗೆ ಅವರು ಮೊದಲ ಪಂದ್ಯವನ್ನು 11-1 ಅಂತರದಲ್ಲಿ ಜಯಿಸಿದ್ದರು. ತಮ್ಮ ಸವಾರಿಯನ್ನು ಆತ್ಮವಿಶ್ವಾಸದಿಂದ ಮುಂದುವರಿಸಿದ ಅವರು, ಪಂದ್ಯವನ್ನು 7-2 ಅಂತರದೊಂದಿಗೆ ಆರಾಮದಾಯಕವಾಗಿ ಜಯಿಸಿದರು ಎಂದು ndtv.com ವರದಿ ಮಾಡಿದೆ.
ನೇಪಾಳದ ಶ್ರೇಷ್ಠಅವರು ದಿಯಾಗೆ ತಿರುಗೇಟು ನೀಡಲು ಪ್ರಯತ್ನಿಸಿದರಾದರೂ, ದಿಯಾ ಎರಡನೆ ಪಂದ್ಯವನ್ನು 11-6 ಅಂತರದಲ್ಲಿ ಸುಲಭವಾಗಿ ಗೆದ್ದುಕೊಂಡರು.
ಮೂರನೆಯ ಪಂದ್ಯದಲ್ಲಿ ಭಾರತದ ದಿಯಾ ಮೇಲೆ ಒತ್ತಡ ಹೇರುವಲ್ಲಿ ವಿಫಲವಾದ ನೇಪಾಳದ ಶ್ರೇಷ್ಠ, ಪಂದ್ಯವನ್ನು 11-8 ಅಂತರದಲ್ಲಿ ಸೋತರು. ಇದರಿಂದ ಭಾರತಕ್ಕೆ ಆರಂಭಿಕ ಮುನ್ನಡೆ ದೊರೆಯಿತು.
ನಬಿತಾ ಶ್ರೇಷ್ಠ ವಿರುದ್ಧ ಎರಡನೆಯ ಪಂದ್ಯವಾಡಿದ ಆಯ್ಹಿಕಾ, ಮೊದಲಿಗೆ 2-1 ಮುನ್ನಡೆ ಸಾಧಿಸಿ, ನಂತರ ಪಂದ್ಯವನ್ನು 5-3 ಅಂತರಕ್ಕೆ ಕೊಂಡೊಯ್ದರು. ನಂತರ 11-3 ಅಂತರದಲ್ಲಿ ಮೊದಲ ಪಂದ್ಯವನ್ನು ಜಯಿಸಿದರು.
ಆಯ್ಹಿಕಾರಿಗೆ ಎರಡನೆ ಪಂದ್ಯದಲ್ಲಿ ಪ್ರಬಲ ಪೈಪೋಟಿ ಒಡ್ಡಿದ ನಬಿತಾ, ಪ್ರತಿ ಪಾಯಿಂಟ್ ಗೂ ಆಯ್ಹಿಕಾ ಹೋರಾಟ ನಡೆಸುವಂತೆ ಮಾಡಿದರು. ಹೀಗಿದ್ದೂ ಆಯ್ಹಿಕಾ ಎರಡನೆ ಪಂದ್ಯವನ್ನು 11-7 ಅಂತರದಲ್ಲಿ ಗೆದ್ದುಕೊಂಡರು.
ಮೂರನೆಯ ಪಂದ್ಯದಲ್ಲಿ ನಬಿತಾ ಪೇಲವ ಆಟ ಪ್ರದರ್ಶಿಸಿದ್ದರಿಂದ ಆಯ್ಹಿಕಾ ಆ ಪಂದ್ಯವನ್ನು 11-2 ಅಂತರದಲ್ಲಿ ಜಯಿಸಿದರು. ಇದರಿಂದ ಭಾರತಕ್ಕೆ ನೇಪಾಳದ ವಿರುದ್ಧ 2-0 ಮುನ್ನಡೆ ದೊರೆಯಿತು.
ಮೂರನೆಯ ಪಂದ್ಯದಲ್ಲಿ ನೇಪಾಳದ ಇವಾನಾ ಥಾಪಾ ಮಗರ್ ಅವರನ್ನು ಎದುರಿಸಿದ ಸುತೀರ್ಥ, ಪಂದ್ಯವನ್ನು ಆದಷ್ಟೂ ಬೇಗ ಮುಗಿಸುವ ಧಾವಂತ ಪ್ರದರ್ಶಿಸಿದರು. ಇವಾನಾಗೆ ಯಾವುದೇ ಸಣ್ಣ ಅವಕಾಶವನ್ನೂ ನೀಡದ ಸುತೀರ್ಥ, ಮೊದಲ ಸುತ್ತಿನಲ್ಲಿ 8-0 ಅಂತರದ ಗೆಲುವು ಸಾಧಿಸಿದರು. ನಂತರ ಎರಡು ಮತ್ತು ಮೂರನೆಯ ಸುತ್ತನ್ನು ಕ್ರಮವಾಗಿ 11-5 ಹಾಗೂ 11-2ರ ಅಂತರದಲ್ಲಿ ಜಯಿಸಿದರು.