ಏಶ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ | ಹರ್ಮನ್ಪ್ರೀತ್ ಅವಳಿ ಗೋಲು : ಭಾರತ ಫೈನಲ್ಗೆ ಲಗ್ಗೆ
►ದಕ್ಷಿಣ ಕೊರಿಯಾ ವಿರುದ್ಧ 4-1 ಗೆಲುವು ►ನಾಳೆ ಪ್ರಶಸ್ತಿ ಸುತ್ತಿನಲ್ಲಿ ಚೀನಾ ಎದುರಾಳಿ
PC : PTI
ಬೀಜಿಂಗ್ : ಚಿತ್ತಾಕರ್ಷಕ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಭಾರತ ತಂಡವು ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳ ಅಂತರದಿಂದ ಸದೆಬಡಿದು ಪುರುಷರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್ನಲ್ಲಿ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಪ್ರಸಕ್ತ ಪಂದ್ಯಾವಳಿಯಲ್ಲಿ ಸೋಲಿಲ್ಲದ ಸರದಾರನಾಗಿರುವ ಭಾರತವು ಸೋಮವಾರ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಮತ್ತೊಂದು ಶ್ರೇಷ್ಠ ಪ್ರದರ್ಶನ ನೀಡಿತು. ಉತ್ತಮ್ ಸಿಂಗ್(13ನೇ ನಿಮಿಷ), ಹರ್ಮನ್ಪ್ರೀತ್ ಸಿಂಗ್(19ನೇ ಹಾಗೂ 45ನೇ ನಿಮಿಷ) ಹಾಗೂ ಜರ್ಮನ್ಪ್ರೀತ್ ಸಿಂಗ್(32ನೇ ನಿಮಿಷ)ಭಾರತದ ಪರ ಅಮೂಲ್ಯ ಕೊಡುಗೆ ನೀಡಿದರು.
ಉತ್ತಮ್ ಹಾಗೂ ಜರ್ಮನ್ಪ್ರೀತ್ ಫೀಲ್ಡ್ ಗೋಲು ಗಳಿಸಿದರೆ, ನಾಯಕ ಹರ್ಮನ್ಪ್ರೀತ್ ಪೆನಾಲ್ಟಿ ಕಾರ್ನರ್ನ ಮೂಲಕ ಅವಳಿ ಗೋಲು ಗಳಿಸಿದರು. ಹರ್ಮನ್ಪ್ರೀತ್ ಪಂದ್ಯಾವಳಿಯಲ್ಲಿ 7ನೇ ಗೋಲು ಗಳಿಸಿ ಗಮನ ಸೆಳೆದರು.
ದಕ್ಷಿಣ ಕೊರಿಯಾದ ಪರ ಯಾಂಗ್ ಜಿಹುನ್ 33ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.
ಪ್ರಶಸ್ತಿ ಫೇವರಿಟ್ ಭಾರತವು ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆತಿಥೇಯ ತಂಡ ಚೀನಾವನ್ನು ಎದುರಿಸಲಿದೆ.
ಭಾರತವು ಸೆಮಿ ಫೈನಲ್ನಲ್ಲಿ ಕೊರಿಯಾದ ಡಿಫೆನ್ಸ್ ವಿಭಾಗಕ್ಕೆ ನಿರಂತರವಾಗಿ ಒತ್ತಡ ಹೇರಿತು. ಅಭಿಷೇಕ್ 4ನೇ ನಿಮಿಷದಲ್ಲಿ ಗೋಲು ಗಳಿಸುವ ಅವಕಾಶ ಪಡೆದಿದ್ದರು. ಆದರೆ ಕೊರಿಯದ ಗೋಲ್ಕೀಪರ್ ಕಿಮ್ ಜಹಾನ್ ಇದಕ್ಕೆ ಅವಕಾಶ ನೀಡಲಿಲ್ಲ. ಭಾರತದ ಪ್ರಯತ್ನಕ್ಕೆ 13ನೇ ನಿಮಿಷದಲ್ಲಿ ಫಲ ಸಿಕ್ಕಿತು. ಉತ್ತಮ್ ಸಿಂಗ್ ಅವರು ಅರಜಿತ್ ಸಿಂಗ್ ನೀಡಿದ ಪಾಸ್ ನೆರವಿನಿಂದ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.
ಹರ್ಮನ್ಪ್ರೀತ್ ಸಿಂಗ್ 19ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು.
ಜರ್ಮನ್ಪ್ರೀತ್ ಸಿಂಗ್ 32ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಮುನ್ನಡೆಯನ್ನು ವಿಸ್ತರಿಸಿದರು. ಆದರೆ ಕೊರಿಯಾವು ತಕ್ಷಣವೇ ತಿರುಗೇಟು ನೀಡಿದ್ದು, ಯಾಂಗ್ ಜಿಯಾನ್ 33ನೇ ನಿಮಿಷದಲ್ಲಿ ಗೋಲು ಗಳಿಸಿದರು. ಆದರೆ ಭಾರತವು ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದು ಮೂರನೇ ಕ್ವಾರ್ಟರ್ ಮುಕ್ತಾಯವಾಗುವ ಮೊದಲು ಹರ್ಮನ್ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು.
ಭಾರತದ ಗೋಲ್ಕೀಪರ್ ಸೂರಜ್ ಕರ್ಕೇರ ಕೊನೆಯ ಕ್ಷಣಗಳಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದರು. ಈ ಮೂಲಕ ಭಾರತಕ್ಕೆ ಗೆಲುವನ್ನು ದೃಢಪಡಿಸಿದರು. ಈ ಗೆಲುವಿನ ಮೂಲಕ ಭಾರತವು ಫೈನಲ್ಗೆ ಪ್ರವೇಶಿಸಿತು.
ಭಾರತವು ಪಂದ್ಯಾವಳಿಯ ಇತಿಹಾಸದಲ್ಲಿ ಐದನೇ ಬಾರಿ ಫೈನಲ್ನಲ್ಲಿ ಕಾಣಿಸಿಕೊಂಡಿದೆ.
ಲೀಗ್ ಹಂತದ ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು ಎದುರಿಸಿದ್ದ ಭಾರತ ತಂಡವು 3-0 ಅಂತರದಿಂದ ಮಣಿಸಿತ್ತು. ಆ ನಂತರ ಜಪಾನ್(5-1), ಮಲೇಶ್ಯ(8-1), ಕೊರಿಯಾ(3-1) ಹಾಗೂ ಪಾಕಿಸ್ತಾನ(2-1) ತಂಡಗಳನ್ನು ಮಣಿಸಿ ಅಜೇಯ ಗೆಲುವಿನ ದಾಖಲೆಯೊಂದಿಗೆ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿತು. ನಾಳೆ ಸೆಮಿ ಫೈನಲ್ ಪಂದ್ಯವನ್ನೂ ಗೆಲ್ಲುವ ಮೂಲಕ ಸತತ ಆರನೇ ಗೆಲುವು ದಾಖಲಿಸಿದೆ.