ಏಶ್ಯನ್ ಪ್ಯಾರಾ ಗೇಮ್ಸ್: ಪದಕ ಗಳಿಕೆಯಲ್ಲಿ ಇತಿಹಾಸ ಬರೆದ ಭಾರತ
Photo: X/Sunil_Deodhar
ಹೊಸದಿಲ್ಲಿ : ಹಾಂಗ್ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಗರಿಷ್ಠ ಸಂಖ್ಯೆಯ ಪದಕಗಳನ್ನು ಗಳಿಸಿರುವ ಭಾರತೀಯ ಪ್ಯಾರಾ ಅಥ್ಲೀಟ್ಗಳು ಐತಿಹಾಸಿಕ ಮೈಲಿಗಲ್ಲು ತಲುಪಿದರು. ಭಾರತವು ಪ್ರಸಕ್ತ ಗೇಮ್ಸ್ನಲ್ಲಿ 18 ಚಿನ್ನ ಸಹಿತ ಒಟ್ಟು 82 ಪದಕಗಳನ್ನು ಜಯಿಸಿದೆ.
ಈ ಅಮೋಘ ಸಾಧನೆಯ ಮೂಲಕ ಭಾರತವು 2018ರ ಆವೃತ್ತಿಯ ಗೇಮ್ಸ್ನಲ್ಲಿನ ಪದಕಗಳ ದಾಖಲೆ(72 ಪದಕಗಳು)ಯನ್ನು ಮುರಿಯಿತು. 4ನೇ ದಿನವಾದ ಗುರುವಾರ ಭಾರತವು 3 ಚಿನ್ನ ಸಹಿತ 18 ಪದಕಗಳನ್ನು ಜಯಿಸಿದೆ. ಭಾರತವು ಸ್ಪರ್ಧಾವಳಿಯಲ್ಲಿ 18 ಚಿನ್ನ, 23 ಬೆಳ್ಳಿ ಹಾಗೂ 41 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
ಇನ್ನೂ 2 ದಿನಗಳ ಗೇಮ್ಸ್ ಬಾಕಿ ಇದ್ದು, ಭಾರತವು ಈ ಆವೃತ್ತಿಯ ಗೇಮ್ಸ್ನಲ್ಲಿ 100ಕ್ಕೂ ಅಧಿಕ ಪದಕ ಗೆಲ್ಲುವ ಸಾಧ್ಯತೆಯಿದೆ.
82 ಪದಕಗಳಲ್ಲಿ ಅತ್ಲೀಟ್ಗಳು 45 ಪದಕ ಜಯಿಸಿದ್ದಾರೆ. ಸಚಿನ್(ಪುರುಷರ ಎಫ್ 46 ಶಾಟ್ಪುಟ್), ಪ್ಯಾರಾ ಶೂಟರ್ ಸಿದ್ದಾರ್ಥ್ ಬಾಬು(ಮಿಕ್ಸೆಡ್ 50 ಮೀ. ರೈಫಲ್ ಪ್ರೊನ್ ಎಸ್ಎಚ್1)247.7 ಅಂಕ ಗಳಿಸಿ ಚಿನ್ನ ಗೆದ್ದುಕೊಂಡರು. ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್ ಅವರನ್ನೊಳಗೊಂಡ ಕಾಂಪೌಂಡ್ ಮಿಕ್ಸೆಡ್ ಟೀಮ್ ಚೀನಾದ ಎದುರಾಳಿಯನ್ನು 151-149 ಅಂತರದಿಂದ ಮಣಿಸಿ ಚಿನ್ನ ಜಯಿಸಿದರು.