ಏಶ್ಯನ್ ಪ್ಯಾರಾ ಗೇಮ್ಸ್: ಒಂದೇ ಗೇಮ್ಸ್ ನಲ್ಲಿ 2 ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಶೀತಲ್ ದೇವಿ
ಶೀತಲ್ ದೇವಿ Photo- PTI
ಹಾಂಗ್ಝೌ (ಚೀನಾ) : ಒಂದೇ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾಗಿ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ ದಾಖಲೆಗೆ ಸೇರಿದ್ದಾರೆ. ಚೀನಾದ ಹಾಂಗ್ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ಅದೇ ವೇಳೆ, ಕ್ರೀಡಾಕೂಟ ಮುಕ್ತಾಯದ ಮುನ್ನಾ ದಿನವಾದ ಶುಕ್ರವಾರ ಭಾರತದ ಪದಕಗಳ ಸಂಖ್ಯೆ 99ಕ್ಕೇರಿದೆ.
ಶುಕ್ರವಾರ ಭಾರತ 7 ಚಿನ್ನ ಸೇರಿದಂತೆ 17 ಪದಕಗಳನ್ನು ಗೆದ್ದಿದೆ. ಬ್ಯಾಡ್ಮಿಂಟನ್ ಆಟಗಾರರು ಅತಿಹೆಚ್ಚಿನ, ಅಂದರೆ ನಾಲ್ಕು ಚಿನ್ನ ಸೇರಿದಂತೆ 8 ಪದಕಗಳನ್ನು ಗೆದ್ದಿದ್ದಾರೆ.
ಶುಕ್ರವಾರ ಭಾರತ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿತ್ತು. ಅದು 25 ಚಿನ್ನ, 29 ಬೆಳ್ಳಿ ಮತ್ತು 45 ಕಂಚಿನ ಪದಕಗಳನ್ನು ಗೆದ್ದಿದೆ. ಮೊದಲ ಐದು ಸ್ಥಾನಗಳನ್ನು ಕ್ರಮವಾಗಿ ಚೀನಾ, ಜಪಾನ್, ಇರಾನ್, ದಕ್ಷಿಣ ಕೊರಿಯ ಮತ್ತು ಇಂಡೋನೇಶ್ಯ ಪಡೆದಿವೆ.
ಶುಕ್ರವಾರ ಶೀತಲ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಚಿನ್ನ ಗೆದ್ದರು. ಗುರುವಾರ ಅವರು ಕಾಂಪೌಂಡ್ ಮಿಶ್ರ ತಂಡ ಸ್ಪರ್ಧೆಯಲ್ಲಿಯೂ ಚಿನ್ನ ಗೆದ್ದಿದ್ದರು.
ಜಮ್ಮು ಮತ್ತು ಕಾಶ್ಮೀರದ 16 ವರ್ಷದ ಶೀತಲ್ ಮಹಿಳೆಯರ ಡಬಲ್ಸ್ ಕಾಂಪೌಂಡ್ ಸ್ಪರ್ಧೆಯಲ್ಲಿ ಬೆಳ್ಳಿಯನ್ನೂ ಗೆದ್ದಿದ್ದಾರೆ.