ಇಬ್ಬರು ಫುಟ್ಬಾಲ್ ಆಟಗಾರ್ತಿಯರ ಮೇಲೆ ಹಲ್ಲೆ: ತನಿಖೆಗೆ ಸಮಿತಿ ರಚಿಸಿದ ಎಐಎಫ್ಎಫ್
ಕಠಿಣ ಕ್ರಮಕ್ಕೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಆದೇಶ

ಅನುರಾಗ್ ಠಾಕೂರ್ | Photo: PTI
ಹೊಸದಿಲ್ಲಿ : ಗೋವಾದಲ್ಲಿ ನಡೆಯುತ್ತಿರುವ ಇಂಡಿಯನ್ ವುಮೆನ್ಸ್ ಲೀಗ್ ಟೂರ್ನಮೆಂಟ್ ನಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್)ಸದಸ್ಯರೊಬ್ಬರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಇಬ್ಬರು ಫುಟ್ಬಾಲ್ ಆಟಗಾರ್ತಿಯರು ಆರೋಪಿಸಿದ್ದಾರೆ. ದೈಹಿಕ ಹಲ್ಲೆ ಆರೋಪದ ಕುರಿತು ಸಮಿತಿಯಿಂದ ತನಿಖೆ ಮುಗಿಯುವ ತನಕ ಫುಟ್ಬಾಲ್ ಗೆ ಸಂಬಂಧಿಸಿದ ಚಟುವಟಿಕೆಗಳಿಂದ ದೂರ ಇರುವಂತೆ ತನ್ನ ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾಗೆ ಎಐಎಫ್ಎಫ್ ಸೂಚಿಸಿದೆ.
ಭಾರತದ ಮಹಿಳಾ ಫುಟ್ಬಾಲ್ ಲೀಗ್ 2ನೇ ವಿಭಾಗದಲ್ಲಿ ಭಾಗವಹಿಸುತ್ತಿರುವ ಹಿಮಾಚಲಪ್ರದೇಶ ಮೂಲದ ಖಾಡ್ ಎಫ್ಸಿಯ ಇಬ್ಬರು ಫುಟ್ಬಾಲ್ ಆಟಗಾರ್ತಿಯರು ಕ್ಲಬ್ನ ಮಾಲಿಕ ದೀಪಕ್ ಶರ್ಮಾ ಮಾರ್ಚ್ 28ರ ರಾತ್ರಿ ತಮ್ಮ ಕೋಣೆಗೆ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಟಗಾರ್ತಿಯರ ದೂರಿನ ಆಧಾರದ ಮೇಳೆ ಮಾಪುಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಐಎಫ್ಎಫ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಆರೋಪಿ ದೀಪಕ್ ಶರ್ಮಾ ವಿರುದ್ಧ ತ್ವರಿತವಾಗಿ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಎಐಎಫ್ಎಫ್ಗೆ ಆದೇಶಿಸಿದ್ದಾರೆ.
ಗೋವಾದಲ್ಲಿ ಇಬ್ಬರು ಫುಟ್ಬಾಲ್ ಆಟಗಾರ್ತಿಯರ ಮೇಲೆ ಅಧಿಕಾರಿಯೊಬ್ಬ ನಡೆಸಿರುವ ಹಲ್ಲೆಯನ್ನು ಕ್ರೀಡಾ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ.
ಆರೋಪಿ ಶರ್ಮಾ ರಾಷ್ಟ್ರೀಯ ಫೆಡರೇಶನ್ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಜೊತೆಗೆ ಹಿಮಾಚಲಪ್ರದೇಶ ಫುಟ್ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
7 ದಿನದೊಳಗೆ ವರದಿ ಸಲ್ಲಿಸುವಂತೆ ತನಿಖಾ ಸಮಿತಿಗೆ ಎಐಎಫ್ಎಫ್ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಆರೋಪಿ ದೀಪಕ್ ಶರ್ಮಾಗೆ ಸಮಿತಿಯ ಪ್ರಕ್ರಿಯೆ ಮುಗಿಯುವ ತನಕ ಫುಟ್ಬಾಲ್ ಚಟುವಟಿಕೆಗಳಿಂದ ದೂರ ಇರುವಂತೆ ಸೂಚಿಸಲಾಗಿದೆ.