ಹರ್ಯಾಣ ಕ್ರೀಡಾಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಅಥ್ಲೆಟಿಕ್ ಕೋಚ್ ಅಮಾನತು
ಸಂದೀಪ್ ಸಿಂಗ್ Photo: twitter.com/Gagan4344
ಚಂಡೀಗಢ: ಹರ್ಯಾಣದ ಕ್ರೀಡಾ ಸಚಿವ ಮತ್ತು ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮಹಿಳಾ ಜೂನಿಯರ್ ಅಥ್ಲೆಟಿಕ್ ಕೋಚ್ ಅವರನ್ನು ಹರ್ಯಾಣ ಕ್ರೀಡಾ ಇಲಾಖೆ ಅಮಾನತು ಮಾಡಿದೆ.
2022ರ ಡಿಸೆಂಬರ್ ನಲ್ಲಿ ಸಿಂಗ್ ವಿರುದ್ಧ ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಕೋಚ್ ಎಫ್ಐಆರ್ ದಾಖಲಿಸಿದ್ದರು. ಬಳಿಕ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದರು. ಆದರೆ ಯಾವ ಕಾರಣಕ್ಕೆ ಅಮಾನತುಗೊಳಿಸಲಾಗಿದೆ ಎಂಬ ಬಗ್ಗೆ ಅಮಾನತು ಆದೇಶದಲ್ಲಿ ಯಾವುದೇ ವಿವರ ಇಲ್ಲ. ಆದರೆ ಪ್ರಕರಣವನ್ನು ಇತ್ಯರ್ಥಪಡಿಸುವ ಕುರಿತ ರಾಜಿ ಒಪ್ಪಂದವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ತನ್ನನ್ನು ಅಮಾನತು ಮಾಡಲಾಗಿದೆ ಎನ್ನುವುದು ಕೋಚ್ ಅವರ ಹೇಳಿಕೆ.
"ಪಂಚಕುಲ ಜಿಲ್ಲಾ ಕ್ರೀಡಾ ಅಧಿಕಾರಿಯ ಕಚೇರಿಯಲ್ಲಿ ನಿಯೋಜಿತರಾಗಿರುವ ಜೂನಿಯರ್ ಅಥ್ಲೆಟಿಕ್ ಕೋಚ್ ಕುಮಾರಿ... ಅವರ ಸೇವೆಗಳನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ" ಎಂದು ಕ್ರೀಡಾ ಇಲಾಖೆ ನಿರ್ದೇಶಕ ಯಶೇಂದ್ರ ಸಿಂಗ್ ಆಗಸ್ಟ್ 11ರ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಮಹಿಳಾ ಕೋಚ್ ಈ ಎಫ್ಐಆರ್ ದಾಖಲಿಸಿ ಏಳು ತಿಂಗಳ ಬಳಿಕ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ಸ್ಪಷ್ಟನೆ ಕೇಳಲು ಸಿಂಗ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದರೂ, ಅಂದು ಸಂಜೆ ಮನೆಗೆ ಬಂದು ಈ ಅಮಾನತು ಆದೇಶ ನೀಡಲಾಗಿದೆ ಎಂದು ಮಹಿಳಾ ಕೋಚ್ ಆರೋಪಿಸಿದ್ದಾರೆ.