ಎಟಿಪಿ ರ್ಯಾಂಕಿಂಗ್: ಟಾಪ್-10ರೊಳಗೆ ಸ್ಥಾನ ಪಡೆದ ಡ್ರೇಪರ್

ಜಾಕ್ ಡ್ರೇಪರ್ | PC : X \ @jackdraper0
ಲಂಡನ್: ಬ್ರಿಟನ್ನ 23ರ ವಯಸ್ಸಿನ ಆಟಗಾರ ಜಾಕ್ ಡ್ರೇಪರ್ ಸೋಮವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಶನಿವಾರ ನಡೆದ ಸೆಮಿ ಫೈನಲ್ನಲ್ಲಿ 2 ಬಾರಿಯ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ರನ್ನು ಸೋಲಿಸಿದ್ದರು. ಮೊದಲ ಬಾರಿ ಎಟಿಪಿ ಮಾಸ್ಟರ್ಸ್-1000 ಟೂರ್ನಿಯ ಫೈನಲ್ಗೆ ಲಗ್ಗೆ ಇಟ್ಟಿದ್ದರು.
ಡ್ರೇಪರ್ ಅವರು ಆ್ಯಂಡಿ ಮರ್ರೆ ನಂತರ ಟಾಪ್-10ಕ್ಕೇರಿರುವ ಬ್ರಿಟನ್ನ 2ನೇ ಯುವ ಆಟಗಾರನಾಗಿದ್ದಾರೆ.
ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಜಯಶಾಲಿಯಾಗಿ ವೃತ್ತಿಜೀವನದ ಅತಿ ದೊಡ್ಡ ಪ್ರಶಸ್ತಿ ಗೆದ್ದಿರುವ ಡ್ರೇಪರ್ ಎಟಿಪಿ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನಕ್ಕೇರಿದ್ದಾರೆ.
ಆಸ್ಟ್ರೇಲಿಯನ್ ಓಪನ್ನಂತರ ಟೆನಿಸ್ ಆಡದ ಇಟಲಿ ಆಟಗಾರ ಜನ್ನಿಕ್ ಸಿನ್ನರ್ ಎಟಿಪಿ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ 2ನೇ ಸುತ್ತಿನಲ್ಲಿ ಸೋತ ಹೊರತಾಗಿಯೂ ಜೊಕೊವಿಕ್ 2 ಸ್ಥಾನ ಭಡ್ತಿ ಪಡೆದು 5ನೇ ಸ್ಥಾನಕ್ಕೇರಿದ್ದಾರೆ. ಕಾಸ್ಪರ್ ರೂಡ್ ಹಾಗೂ ಡೇನಿಯಲ್ ಮೆಡ್ವೆಡೆವ್ ಕೆಲವು ಸ್ಥಾನ ಕಳೆದುಕೊಂಡಿದ್ದಾರೆ.
ರೂನ್ 12ನೇ ಸ್ಥಾನಕ್ಕೇರಿದರೆ, ಕ್ವಾರ್ಟರ್ ಫೈನಲ್ ತಲುಪಿರುವ ಅರ್ಥರ್ ಫಿಲ್ಸ್ ಜೀವನಶ್ರೇಷ್ಠ 17ನೇ ಸ್ಥಾನಕ್ಕೇರಿದ್ದಾರೆ.
►ಎಟಿಪಿ ರ್ಯಾಂಕಿಂಗ್
1 ಜನ್ನಿಕ್ ಸಿನ್ನರ್(ಇಟಲಿ), 2. ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ), 3. ಕಾರ್ಲೊಸ್ ಅಲ್ಕರಾಝ್(ಸ್ಪೇನ್), 4. ಟೇಲರ್ ಫ್ರಿಟ್ಝ್(ಅಮೆರಿಕ), 5. ನೊವಾಕ್ ಜೊಕೊವಿಕ್(ಸರ್ಬಿಯ), 6. ಕಾಸ್ಪರ್ ರೂಡ್(ನಾರ್ವೆ), 7. ಜಾಕ್ ಡ್ರೇಪರ್(ಬ್ರಿಟನ್),8. ಡೇನಿಯಲ್ ಮೆಡ್ವೆಡೆವ್, 9. ಆಂಡ್ರೆ ರುಬ್ಲೇವ್, 10. ಸ್ಟೆಫನೋಸ್ ಸಿಟ್ಸಿಪಾಸ್(ಗ್ರೀಸ್)