ಯುರೋಪ್ನಲ್ಲಿ ಆಶ್ರಯ ಪಡೆಯಲು ಯತ್ನ: ಪಾಕಿಸ್ತಾನದ ಮೂವರು ಹಾಕಿ ಆಟಗಾರರು, ಫಿಸಿಯೋಗೆ ಆಜೀವ ನಿಷೇಧ
ಸಾಂದರ್ಭಿಕ ಚಿತ್ರ
ಲಾಹೋರ್: ಕಳೆದ ತಿಂಗಳು ನೆದರ್ಲ್ಯಾಂಡ್ಸ್ ಹಾಗೂ ಪೋಲ್ಯಾಂಡ್ನಲ್ಲಿ ನಡೆದ ನೇಶನ್ಸ್ ಕಪ್ ವೇಳೆ ಯುರೋಪ್ನಲ್ಲಿ ಆಶ್ರಯ ಪಡೆಯಲು ಯತ್ನಿಸಿದ ಪಾಕಿಸ್ತಾನದ ಮೂವರು ಹಾಕಿ ಆಟಗಾರರು ಹಾಗೂ ಫಿಸಿಯೋಥೆರಪಿಸ್ಟ್ಗೆ ಆಜೀವ ನಿಷೇಧ ಹೇರಲಾಗಿದೆ.
ಪಾಕಿಸ್ತಾನ ಹಾಕಿ ಫೆಡರೇಶನ್ನ(ಪಿಎಚ್ಎಫ್)ಗಮನಕ್ಕೆ ತರದೆ ಮೂವರು ಆಟಗಾರರಾದ-ಮುರ್ತಾಝಾ ಯಾಕೂಬ್, ಇಹ್ತೇಶಾಮ್ ಅಸ್ಲಾಮ್ ಹಗೂ ಅಬ್ದುರ್ ರೆಹಮಾನ್ ಜೊತೆಗೆ ಫಿಸಿಯೋಥೆರಪಿಸ್ಟ್ ವಕಾಸ್ ಅವರು ಯುರೋಪ್ನಲ್ಲಿ ಆಶ್ರಯ ಪಡೆಯಲು ಯತ್ನಿಸಿದ್ದಾರೆ.
ಹಾಕಿ ತಂಡವು ಪಾಕಿಸ್ತಾನಕ್ಕೆ ಅಗಮಿಸಿದ ನಂತರ ನಾವು ಏಶ್ಯನ್ ಚಾಂಪಿಯನ್ಸ್ ಟ್ರೋಫಿಗಾಗಿ ತರಬೇತಿ ಶಿಬಿರವನ್ನು ಘೋಷಿಸಿದ್ದೆವು. ಆಗ ವೈಯಕ್ತಿಕ ಕಾರಣಗಳಿಂದಾಗಿ ಶಿಬಿರಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಅವರು ನಮಗೆ ತಿಳಿಸಿದ್ದಾರೆ ಎಂದು ಪಿಎಚ್ಎಫ್ ಪ್ರಧಾನ ಕಾರ್ಯದರ್ಶಿ ರಾಣಾ ಮುಜಾಹಿದ್ ಗುರುವಾರ ದೃಢಪಡಿಸಿದರು.
ಹಾಕಿ ತಂಡಕ್ಕೆ ನೀಡಲಾದ ವೀಸಾಗಳ ಮೇಲೆ ಅವರು ಮತ್ತೊಮ್ಮೆ ಹಾಲೆಂಡ್ಗೆ ತೆರಳಿದ್ದಾರೆ. ಅವರು ಅಲ್ಲಿ ರಾಜಕೀಯ ಆಶ್ರಯ ಪಡೆಯಲು ಮನವಿ ಸಲ್ಲಿಸಿದ್ದಾರೆಂದು ನಂತರ ನಮಗೆ ತಿಳಿಯಿತು ಎಂದು ಮುಜಾಹಿದ್ ಹೇಳಿದ್ದಾರೆ.
ಈ ಬೆಳವಣಿಗೆಯು ಪಾಕಿಸ್ತಾನ ಹಾಕಿಗೆ ನಿರಾಶಾದಾಯಕವಾಗಿದೆ. ಇಂತಹ ಪರಿಸ್ಥಿತಿಯು ಭವಿಷ್ಯದ ಅಂತರ್ರಾಷ್ಟ್ರೀಯ ಸ್ಪರ್ಧೆಗಳಿಗೆ ಯುರೋಪಿಯನ್ ರಾಷ್ಟ್ರಗಳಿಗೆ ವೀಸಾಗಳಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸುತ್ತದೆ . ಆಜೀವ ನಿಷೇಧಕ್ಕೆ ಪಿಎಚ್ಎಫ್ ಅನುಮೋದಿಸಿದೆ.ಆಟಗಾರರನ್ನು ಗಡೀಪಾರು ಮಾಡಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ಕ್ರಮಕ್ಕಾಗಿ ನಾವು ಈಗಾಗಲೇ ಆಂತರಿಕ ಹಾಗೂ ವಿದೇಶಾಂಗ ಸಚಿವಾಲಯಗಳಿಗೆ ಮನವಿ ಮಾಡಿದ್ದೇವೆ ಎಂದು ಮುಜಾಹಿದ್ ಹೇಳಿದ್ದಾರೆ.