ಶ್ರೀಲಂಕಾದ ವಿರುದ್ಧ ಆಸ್ಟ್ರೇಲಿಯ 654/6 ಡಿಕ್ಲೇರ್
ಮೊದಲ ಟೆಸ್ಟ್: ಉಸ್ಮಾನ್ ಖ್ವಾಜಾ ದ್ವಿಶತಕ, ಇಂಗ್ಲಿಸ್ ಶತಕ

PC : NDTV
ಗಾಲೆ, ಜ.30: ಉಸ್ಮಾನ್ ಖ್ವಾಜಾ ಸಿಡಿಸಿದ ಚೊಚ್ಚಲ ದ್ವಿಶತಕ (232 ರನ್) ಹಾಗೂ ಜೋಶ್ ಇಂಗ್ಲಿಸ್(102 ರನ್) ಮೊದಲ ಶತಕದ ಸಹಾಯದಿಂದ 6 ವಿಕೆಟ್ಗಳ ನಷ್ಟಕ್ಕೆ 654 ರನ್ ಗಳಿಸಿ ತನ್ನ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಶ್ರೀಲಂಕಾ ತಂಡದ ಮೊದಲ 3 ವಿಕೆಟ್ಗಳನ್ನು ಉರುಳಿಸಿ ಮೊದಲ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ಮಳೆಯಿಂದಾಗಿ 2ನೇ ದಿನದಾಟ ಬೇಗನೆ ಕೊನೆಗೊಂಡಾಗ ಶ್ರೀಲಂಕಾ ತಂಡವು 44 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡಿದ್ದು, ಸೀನಿಯರ್ ಬ್ಯಾಟರ್ಗಳಾದ ದಿನೇಶ್ ಚಾಂಡಿಮಾಲ್(9 ರನ್)ಹಾಗೂ ಕಮಿಂದು ಮೆಂಡಿಸ್(13 ರನ್) ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರರಾದ ಒಶಾಡ ಫೆರ್ನಾಂಡೊ(7 ರನ್), ಡಿ.ಕರುಣರತ್ನೆ(7 ರನ್) ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್(7 ರನ್)ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯದ ಪರ 3ನೇ ವಿಕೆಟ್ಗೆ 266 ರನ್ ಜೊತೆಯಾಟ ನಡೆಸಿದ ಖ್ವಾಜಾ ಹಾಗೂ ಸ್ಟೀವನ್ ಸ್ಮಿತ್ ತಂಡವು ಬೃಹತ್ ಮೊತ್ತ ಗಳಿಸಲು ಭದ್ರ ಬುನಾದಿ ಹಾಕಿಕೊಟ್ಟರು.
ಹಂಗಾಮಿ ನಾಯಕ ಸ್ಮಿತ್ 141 ರನ್(251 ಎಸೆತ) ಗಳಿಸಿ 10,000 ಟೆಸ್ಟ್ ರನ್ ಮೈಲಿಗಲ್ಲು ತಲುಪಿದರು. ಖ್ವಾಜಾ ಶ್ರೀಲಂಕಾ ನೆಲದಲ್ಲಿ ದ್ವಿಶತಕ ಗಳಿಸಿದ ಆಸ್ಟ್ರೇಲಿಯದ ಮೊದಲ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.
6 ವಿಕೆಟ್ಗಳ ನಷ್ಟಕ್ಕೆ 654 ರನ್ ಗಳಿಸಿದ ಆಸ್ಟ್ರೇಲಿಯ ತಂಡವು ಶ್ರೀಲಂಕಾದಲ್ಲಿ ತನ್ನ ಗರಿಷ್ಠ ಮೊತ್ತ ಗಳಿಸಿತು. 1980ರಲ್ಲಿ ಏಶ್ಯಖಂಡದಲ್ಲಿ ಪಾಕಿಸ್ತಾನದ ವಿರುದ್ಧ ನಿರ್ಮಿಸಿದ್ದ ರನ್ ದಾಖಲೆ(617 ರನ್)ಯನ್ನು ಮುರಿಯಿತು.
ಸ್ಮಿತ್ ಕೊನೆಗೂ ಇನಿಂಗ್ಸ್ ಡಿಕ್ಲೇರ್ ಮಾಡಿದಾಗ ವಿಕೆಟ್ಕೀಪರ್-ಬ್ಯಾಟರ್ ಅಲೆಕ್ಸ್ ಕ್ಯಾರಿ(ಔಟಾಗದೆ 46)ಹಾಗೂ ಮಿಚೆಲ್ ಸ್ಟಾರ್ಕ್(19 ರನ್) ಕ್ರೀಸ್ನಲ್ಲಿದ್ದರು.
ಸ್ಮಿತ್ ಔಟಾದ ನಂತರ ತನಗೆ ಲಭಿಸಿದ ಅವಕಾಶ ಚೆನ್ನಾಗಿ ಬಳಸಿಕೊಂಡ ಜೋಶ್ ಇಂಗ್ಲಿಸ್ ಕೇವಲ 90 ಎಸೆತಗಳಲ್ಲಿ 102 ರನ್ ಗಳಿಸಿದ್ದರು. ಖ್ವಾಜಾರೊಂದಿಗೆ 5ನೇ ವಿಕೆಟ್ಗೆ 146 ರನ್ ಜೊತೆಯಾಟ ನಡೆಸಿ ಶ್ರೀಲಂಕಾದ ಬೌಲಿಂಗ್ ದಾಳಿ ಪುಡಿಗಟ್ಟಿದರು. ಇಂಗ್ಲಿಸ್ ತನ್ನ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಬೆನ್ನಿಗೇ ಪ್ರಭಾತ್ ಜಯಸೂರ್ಯಗೆ ವಿಕೆಟ್ ಒಪ್ಪಿಸಿದರು.
352 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ನೆರವಿನಿಂದ 232 ರನ್ ಸಿಡಿಸಿದ್ದ ಖ್ವಾಜಾ ಅವರ ಮ್ಯಾರಥಾನ್ ಇನಿಂಗ್ಸ್ಗೆ ಜಯಸೂರ್ಯ ತೆರೆ ಎಳೆದರು. 290 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ತಕ್ಷಣ ತನ್ನ ಹೆಲ್ಮೆಟ್ ತೆಗೆದ ಖ್ವಾಜಾ, ಮೈದಾನಕ್ಕೆ ಮುತ್ತಿಟ್ಟರು. ಸಹ ಆಟಗಾರರು ಹಾಗೂ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.
ಖ್ವಾಜಾ ಈ ಹಿಂದೆ 2023ರಲ್ಲಿ ಸಿಡ್ನಿಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಗರಿಷ್ಠ ಟೆಸ್ಟ್ ಸ್ಕೋರ್(ಔಟಾಗದೆ 195)ಗಳಿಸಿದ್ದರು.
ಒಟ್ಟು 154 ಓವರ್ಗಳ ಬೌಲಿಂಗ್ ಮಾಡಿದ ಜಯಸೂರ್ಯ(3-193) ಹಾಗೂ ಜೆಫ್ರೆ ವಾಂಡರ್ಸೆ(3-182) ತಲಾ 3 ವಿಕೆಟ್ಗಳನ್ನು ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 654/6 ಡಿಕ್ಲೇರ್
(ಉಸ್ಮಾನ್ ಖ್ವಾಜಾ 232, ಸ್ಮಿತ್ 141, ಜೋಶ್ ಇಂಗ್ಲಿಸ್ 102, ಟ್ರಾವಿಸ್ ಹೆಡ್ 57, ಜೆಫ್ರೆ ವಾಂಡರ್ಸೆ 3-182, ಪ್ರಭಾತ್ ಜಯಸೂರ್ಯ 3-193)
ಶ್ರೀಲಂಕಾ ಮೊದಲ ಇನಿಂಗ್ಸ್: 44/3
(ಕಮಿಂದು ಮೆಂಡಿಸ್ ಔಟಾಗದೆ 13, ಚಾಂಡಿಮಾಲ್ ಔಟಾಗದೆ 9,ಲಿಯೊನ್ 1-7, ಸ್ಟಾರ್ಕ್ 1-10)