ಮೊದಲ ಟೆಸ್ಟ್ | ಆಸ್ಟ್ರೇಲಿಯ ತಂಡಕ್ಕೆ ಭರ್ಜರಿ ಜಯ, ಸರಣಿ ಮುನ್ನಡೆ

PC : NDTV
ಗಾಲೆ: ಆಸ್ಟ್ರೇಲಿಯ ಕ್ರಿಕೆಟ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಇನಿಂಗ್ಸ್ ಹಾಗೂ 242 ರನ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯ ತಂಡವು ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ಗಳ ನಷ್ಟಕ್ಕೆ 654 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್ನಲ್ಲಿ ಕೇವಲ 165 ರನ್ ಗಳಿಸಿ ಫಾಲೋ ಆನ್ಗೆ ಸಿಲುಕಿತು.
ಶ್ರೀಲಂಕಾ ತಂಡವು ತನ್ನ 2ನೇ ಇನಿಂಗ್ಸ್ನಲ್ಲಿ 247 ರನ್ ಗಳಿಸಿ ಸರ್ವಪತನಗೊಂಡಿತು. ಜೆಫ್ರೆ ವಾಂಡರ್ಸೆ(53 ರನ್, 47 ಎಸೆತ)ಕೆಳ ಕ್ರಮಾಂಕದಲ್ಲಿ ಅರ್ಧಶತಕದ ಕೊಡುಗೆ ನೀಡಿದರು. ಆಂಜೆಲೊ ಮ್ಯಾಥ್ಯೂಸ್(41 ರನ್), ಧನಂಜಯ ಡಿಸಿಲ್ವ(39 ರನ್), ಕುಸಾಲ್ ಮೆಂಡಿಸ್(34 ರನ್),ಕಮಿಂದು ಮೆಂಡಿಸ್(32 ರನ್) ಹಾಗೂ ದಿನೇಶ್ ಚಾಂಡಿಮಾಲ್(31 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಆಸ್ಟ್ರೇಲಿಯ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ಗಳಾದ ನಾಥನ್ ಲಿಯೊನ್(4-78) ಹಾಗೂ ಮ್ಯಾಥ್ಯೂ ಕುಹ್ನೆಮನ್(4-86)ತಲಾ 4 ವಿಕೆಟ್ಗಳನ್ನು ಪಡೆದರು.
ಇದಕ್ಕೂ ಮೊದಲು 5 ವಿಕೆಟ್ಗಳ ನಷ್ಟಕ್ಕೆ 136 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡವು ಮ್ಯಾಥ್ಯೂ ಕುಹ್ನೆಮನ್(5-63)ಹಾಗೂ ನಾಥನ್ಲಿಯೊನ್(3-57) ಸ್ಪಿನ್ ಮೋಡಿಗೆ ತತ್ತರಿಸಿ 165 ರನ್ಗೆ ಆಲೌಟಾಯಿತು. ಮೊದಲ ಇನಿಂಗ್ಸ್ನಲ್ಲಿ 489 ರನ್ನಿಂದ ಹಿನ್ನಡೆ ಕಂಡಿತು.
ಚೊಚ್ಚಲ ದ್ವಿಶತಕ(232 ರನ್)ಸಿಡಿಸಿದ ಉಸ್ಮಾನ್ ಖ್ವಾಜಾ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು