ಆಸ್ಟ್ರೇಲಿಯಾ ತಂಡಕ್ಕೆ ಒತ್ತಡ ನಿಭಾಯಿಸುವುದು ಹೇಗೆ ಎಂಬುದು ತಿಳಿದಿದೆ: ಯುವರಾಜ್ ಸಿಂಗ್ ಎಚ್ಚರಿಕೆ
ವಿಶ್ವಕಪ್ ಫೈನಲ್ ಗೆ ಕ್ಷಣಗಣನೆ...
ಯುವರಾಜ್ ಸಿಂಗ್ | Photo: ANI
ಅಹಮದಾಬಾದ್: "ಆಸ್ಟ್ರೇಲಿಯಾ ತಂಡಕ್ಕೆ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಿದೆ. ಅವರು ಹಲವು ಬಾರಿ ವಿಶ್ವಕಪ್ ಗೆದ್ದಿದ್ದಾರೆ. ನ್ಯೂಝಿಲೆಂಡ್ ತಂಡದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಕೂಡಾ ಆಸ್ಟ್ರೇಲಿಯಾ ತಂಡದ ತಜ್ಞ ಬ್ಯಾಟರ್ಗಳು ವಿಫಲರಾದರೂ, ಪ್ಯಾಟ್ ಕುಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಅದ್ಭುತ ಸಂಯಮ ಪ್ರದರ್ಶಿಸಿದ್ದರು. ಅವರು ದೊಡ್ಡ ಪಂದ್ಯಗಳಲ್ಲಿ ಯಾಕೆ ಗೆಲ್ಲುತ್ತಾರೆಂದರೆ, ಅವರ ಬಳಿ ದೊಡ್ಡ ಪಂದ್ಯದ ಉತ್ಸಾಹವಿದೆ" ಎಂದು ಮಾಜಿ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ರವಿವಾರ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಈ ಎಚ್ಚರಿಕೆ ನೀಡಿರುವ ಯುವರಾಜ್ ಸಿಂಗ್, ಸದ್ಯದ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮ ನೇತೃತ್ವದ ಭಾರತ ತಂಡವು ಅತ್ಯುತ್ತಮವಾಗಿದೆ. ಒಂದು ವೇಳೆ ಭಾರತ ತಂಡವು ಕಳಪೆ ಪ್ರದರ್ಶನ ತೋರಿದರೆ ಮಾತ್ರ ಆಸ್ಟ್ರೇಲಿಯಾ ತಂಡದೆದುರು ಸೋಲು ಅನುಭವಿಸಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ.
"ವಿಶ್ವಕಪ್ ನಲ್ಲಿನ ಭಾರತ ತಂಡದ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ, ಅವರು ಕಳಪೆ ಪ್ರದರ್ಶನ ನೀಡುತ್ತಾರೆ ಎಂದು ಅನ್ನಿಸುತ್ತಿಲ್ಲ. ಭಾರತ ತಂಡವು ತಪ್ಪೆಸಗಿದರೆ ಮಾತ್ರ ಈ ಫೈನಲ್ ಪಂದ್ಯದಲ್ಲಿ ಪರಾಭವಗೊಳ್ಳಲಿದೆ. ಆದರೆ, ಅವರು ಈ ಕ್ಷಣ ಅಪಾರ ಆತ್ಮವಿಶ್ವಾಸದಲ್ಲಿದ್ದಾರೆ ಎಂದು ನನಗನ್ನಿಸುತ್ತಿದೆ. 2003ರ ವಿಶ್ವಕಪ್ನಲ್ಲಿ ನಾವು ಉತ್ತಮವಾಗಿ ಆಡಿ ಪೈನಲ್ ಪ್ರವೇಶಿಸಿದರೂ ಆಸ್ಟ್ರೇಲಿಯಾ ತಂಡವು ನಮ್ಮ ಮೇಲೆ ಪಾರಮ್ಯ ಸಾಧಿಸಿತು. ವಿಶ್ವಕಪ್ ಕ್ರೀಡಾಕೂಟದುದ್ದಕ್ಕೂ ಭಾರತ ತಂಡವು ಪಾರಮ್ಯ ಪ್ರದರ್ಶಿಸಿದೆ. ಒಂದು ವೇಳೆ ಆಸ್ಟ್ರೇಲಿಯಾ ತಂಡವು ಅತ್ಯುತ್ತಮ ಆಟ ಪ್ರದರ್ಶಿಸದಿದ್ದರೆ, ಅವರಿಗೆ ಭಾರತ ತಂಡದೆದುರು ಗೆಲ್ಲುವ ಯಾವ ಅವಕಾಶವೂ ಇಲ್ಲ" ಎಂದು ಯುವರಾಜ್ ಸಿಂಗ್ Sports Today ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.