ನಾಳೆ ಲಾಹೋರ್ ನಲ್ಲಿ ಆಸ್ಟ್ರೇಲಿಯ -ಇಂಗ್ಲೆಂಡ್ ಸೆಣಸಾಟ

PC : PTI
ಲಾಹೋರ್: ಸದ್ಯ ಕಳಪೆ ಫಾರ್ಮ್ನಲ್ಲಿರುವ ಇಂಗ್ಲೆಂಡ್ ಹಾಗೂ ಗಾಯದ ಸಮಸ್ಯೆ ಎದುರಿಸುತ್ತಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡಗಳು ಲಾಹೋರ್ನಲ್ಲಿ ಶನಿವಾರ ನಡೆಯಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಸೆಣಸಾಡುವ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿವೆ. ಆ್ಯಶಸ್ ಸರಣಿಯ ಎದುರಾಳಿಗಳಾದ ಉಭಯ ತಂಡಗಳು ಶುಭಾರಂಭದ ನಿರೀಕ್ಷೆಯಲ್ಲಿವೆ.
ಕಳೆದ ಎರಡು ಏಕದಿನ ಸರಣಿಗಳಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡವು ಪಾಕಿಸ್ತಾನ(1-2)ಹಾಗೂ ಶ್ರೀಲಂಕಾ(0-2)ತಂಡಗಳ ವಿರುದ್ಧ ಸೋತಿದೆ. ಇದೀಗ ಉಭಯ ತಂಡಗಳು ಏಕದಿನ ಮಾದರಿ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿವೆ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ ನಂತರ, ಎಲ್ಲ ಮಾದರಿಯ ಕ್ರಿಕೆಟಿಗೆ ಬ್ರೆಂಡನ್ ಮೆಕಲಮ್ ಕೋಚ್ ಆಗಿ ನೇಮಕಗೊಂಡ ಬಳಿಕ ಇಂಗ್ಲೆಂಡ್ ತಂಡವು ಏಕದಿನ ಸರಣಿ ಗೆಲ್ಲುವಲ್ಲಿ ವಿಫಲವಾಗಿದೆ.
ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಇತ್ತೀಚೆಗಷ್ಟೇ ಭಾರತ ತಂಡದ ವಿರುದ್ಧ ಏಕದಿನ ಸರಣಿಯನ್ನು 0-3 ಅಂತರದಿಂದ ಸೋತಿತ್ತು. ಸರಣಿಗೆ ಸರಿಯಾಗಿ ತಯಾರಿ ನಡೆಸದ ಆಂಗ್ಲರ ಪಡೆ ಭಾರತಕ್ಕೆ ಸ್ಪರ್ಧೆಯೊಡ್ಡುವಲ್ಲಿಯೂ ಅಸಮರ್ಥವಾಗಿತ್ತು.
ಒಂದೇ ರೀತಿಯ ಪರಿಸ್ಥಿತಿಯಲ್ಲಿರುವ ಉಭಯ ತಂಡಗಳು ಐಸಿಸಿ ಟೂರ್ನಿಯಲ್ಲಿ ಮೈಕೊಡವಿ ಆಡುವ ವಿಶ್ವಾಸದಲ್ಲಿವೆ.
ಕಳೆದ ವರ್ಷ ಸೆಪ್ಟಂಬರ್ನಲ್ಲಿ ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ ತಂಡವು 3-2 ಅಂತರದಿಂದ ಜಯ ಸಾಧಿಸಿದ್ದು, ಇದು ಆ್ಯಶಸ್ ಎದುರಾಳಿಯ ವಿರುದ್ಧ ಆಸೀಸ್ಗೆ ಮೇಲುಗೈ ಒದಗಿಸಿದೆ. ಆದರೆ ಆ ನಂತರ ಸಾಕಷ್ಟು ಬದಲಾವಣೆಯಾಗಿದ್ದು, ವಿಶ್ವ ಚಾಂಪಿಯನ್ ತಂಡದಲ್ಲಿ ಇದೀಗ ಹಲವು ಪ್ರಮುಖ ಆಟಗಾರರ ಅನುಪಸ್ಥಿತಿ ಇದೆ.
ಪ್ರಮುಖ ಮೂವರು ಆಟಗಾರರಾದ ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿಲ್ಲ. ಇದು ಆಸೀಸ್ನ ವೇಗದ ಬೌಲಿಂಗ್ ವಿಭಾಗದ ಮೇಲೆ ಗಮನಾರ್ಹ ಪರಿಣಾಮಬೀರುವ ಸಾಧ್ಯತೆಯಿದೆ.
ಪಂದ್ಯಾವಳಿಯ ಆರಂಭಿಕ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ದಿಢೀರನೆ ನಿವೃತ್ತಿ ಪ್ರಕಟಸಿದರೆ, ಇನ್ನಿಬ್ಬರು ಆಲ್ರೌಂಡರ್ಗಳಾದ ಮಿಚೆಲ್ ಮಾರ್ಷ್(ಬೆನ್ನುನೋವು)ಹಾಗೂ ಕ್ಯಾಮರೂನ್ ಗ್ರೀನ್(ಗಾಯದ ಸಮಸ್ಯೆ)ಕೂಡ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ‘ಮಿನಿ ವಿಶ್ವಕಪ್’ಎಂದು ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯ ತಂಡವು ಹಿಂದಿನ ಸಾಧನೆಗಳನ್ನು ಪುನರಾವರ್ತಿಸುವ ಬಗ್ಗೆ ಸ್ಪಷ್ಟತೆ ಇಲ್ಲ.
ಆಸ್ಟ್ರೇಲಿಯ ತಂಡವು 2006 ಹಾಗೂ 2009ರಲ್ಲಿ ಸತತ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಗಳನ್ನು ಜಯಿಸಿತ್ತು. ಸ್ಮಿತ್ ಅವರು ಮಾರ್ಷ್ ಅನುಪಸ್ಥಿತಿಯಲ್ಲಿ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದ್ದು, ತಂಡದ ಬ್ಯಾಟಿಂಗ್ ಜವಾಬ್ದಾರಿಯನ್ನು ಹೊರಬೇಕಾಗಿದೆ.
ಸೀಮಿತ ಓವರ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆರಂಭಿಕ ಬ್ಯಾಟರ್ ಆಗಿರುವ ಟ್ರಾವಿಸ್ ಹೆಡ್, ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. 2022ರ ಸರಣಿಯಲ್ಲಿ ಲಾಹೋರ್ನಲ್ಲಿ ಹೆಡ್ ಅವರು 101 ಹಾಗೂ 89 ರನ್ ಗಳಿಸಿದ್ದರು.
ಕಳೆದ ವರ್ಷ ನಡೆದಿರುವ ಸರಣಿಯಲ್ಲಿ ಟ್ರೆಂಟ್ ಬ್ರಿಡ್ಜ್ನಲ್ಲಿ ಇಂಗ್ಲೆಂಡ್ ವಿರುದ್ಧ ಜೀವನಶ್ರೇಷ್ಠ ಔಟಾಗದೆ 154 ರನ್ ಗಳಿಸಿದ್ದ ಹೆಡ್ ಅವರು ಆಂಗ್ಲರಿಗೆ ದೊಡ್ಡ ತಲೆನೋವಾಗುವ ಸಾಧ್ಯತೆಯಿದೆ.
ಬಹುನಿರೀಕ್ಷಿತ ‘ಬಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಡುವ 11ರ ಬಳಗವನ್ನು ಅಂತಿಮಗೊಳಿಸಿದೆ. ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಈ ತಿಂಗಳಾರಂಭದಲ್ಲಿ ಭಾರತ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿರುವ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಿದೆ.
ಇಂಗ್ಲೆಂಡ್ ತಂಡವು ಸ್ಪಿನ್ನರ್ ಆದಿಲ್ ರಶೀದ್ ಜೊತೆಗೆ ಮೂವರು ವೇಗಿಗಳಾದ ಜೋಫ್ರಾ ಆರ್ಚರ್, ಮಾರ್ಕ್ ವುಡ್ ಹಾಗೂ ಬ್ರೆಂಡನ ಕಾರ್ಸ್ರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಇಂಗ್ಲೆಂಡ್ನ ಉದಯೋನ್ಮುಖ ವಿಕೆಟ್ಕೀಪರ್-ಬ್ಯಾಟರ್ ಜಮೀ ಸ್ಮಿತ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದು, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು.
ಭಾರತ ವಿರುದ್ಧ ಸರಣಿಯಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದ ಬೆನ್ ಡಕೆಟ್ ತನ್ನ ತಂಡಕ್ಕೆ ಉತ್ತಮ ಆರಂಭ ಒದಗಿಸುವ ವಿಶ್ವಾಸದಲ್ಲಿದ್ದಾರೆ. ಜೋ ರೂಟ್ ಬ್ಯಾಟಿಂಗ್ನ ಬೆನ್ನೆಲುಬಾಗಿದ್ದಾರೆ. ಭಾರತ ಎದುರಿನ ಸರಣಿಯಲ್ಲಿ ಡಕೆಟ್ ನಂತರ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿದ್ದ ರೂಟ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚುವ ನಿರೀಕ್ಷೆ ಮೂಡಿಸಿದ್ದಾರೆ.
ತನ್ನ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಇಂಗ್ಲೆಂಡ್ ತಂಡವು ಭಾರತದಲ್ಲಾಗಿರುವ ಹಿನ್ನಡೆಯನ್ನು ಮರೆತು ಆಡುವ ನಿರೀಕ್ಷೆಯಲ್ಲಿದೆ.
‘‘ಭಾರತದಲ್ಲಿ ನಾವು ಸರಣಿ ಸೋತಿದ್ದರೂ ನಮ್ಮಲ್ಲಿ ಪ್ರತಿಭೆಗಳಿದ್ದಾರೆ, ವಿಶ್ವ ದರ್ಜೆಯ ಆಟಗಾರರಿದ್ದಾರೆ. ತಂಡದಲ್ಲಿರುವ ಮ್ಯಾಚ್ ವಿನ್ನರ್ಗಳು ಪಂದ್ಯಾವಳಿಯನ್ನು ಗೆದ್ದುಕೊಡುತ್ತಾರೆ ಎಂಬ ನಂಬಿಕೆ ನಮಗಿದೆ’’ ಎಂದು ಸ್ಪಿನ್ನರ್ ರಶೀದ್ ಹೇಳಿದ್ದಾರೆ.
►ಪಿಚ್ ರಿಪೋರ್ಟ್
ಗದ್ದಾಫಿ ಕ್ರೀಡಾಂಗಣ ಸಾಮಾನ್ಯವಾಗಿ ಬ್ಯಾಟರ್ಗಳ ಸ್ವರ್ಗವಾಗಿದೆ. ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆ ಇದ್ದು, ಮೊದಲು ಬೌಲಿಂಗ್ ಮಾಡುವುದು ಉತ್ತಮ ಆಯ್ಕೆಯಾಗಬಹುದು. 2ನೇ ಇನಿಂಗ್ಸ್ನಲ್ಲಿ ಮಂಜಿನ ಹನಿ ಆಟದ ಮೇಲೆ ಪ್ರಭಾವಬೀರಬಹುದು.
►ತಂಡಗಳು
ಇಂಗ್ಲೆಂಡ್ ಇಲೆವೆನ್: ಫಿಲ್ ಸಾಲ್ಟ್, ಬೆನ್ ಡಕೆಟ್, ಜಮೀ ಸ್ಮಿತ್(ವಿಕೆಟ್ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್(ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಬ್ರೆಂಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
ಆಸ್ಟ್ರೇಲಿಯ(ಸಂಭಾವ್ಯ ಇಲೆವೆನ್) : ಟ್ರಾವಿಸ್ ಹೆಡ್, ಜೇಕ್ ಫ್ರೆಸರ್-ಮೆಕ್ಗುರ್ಕ್, ಸ್ಟೀವ್ ಸ್ಮಿತ್(ನಾಯಕ), ಮಾರ್ನಸ್ ಲ್ಯಾಬುಶೇನ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್, ಅಲೆಕ್ಸ್ ಕ್ಯಾರಿ(ವಿಕೆಟ್ಕೀಪರ್), ನಾಥನ್ ಎಲ್ಲಿಸ್, ಆ್ಯರೊನ್ ಹಾರ್ಡಿ, ಸಿಯನ್ ಅಬಾಟ್, ಆಡಮ್ ಝಂಪಾ.