ಆಸ್ಟ್ರೇಲಿಯನ್ ಓಪನ್; ಕ್ವಾರ್ಟರ್ ಫೈನಲ್ ಪ್ರವೇಶಿಸಿ ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಕ್
Photo : twitter
ಮೆಲ್ಬರ್ನ್: ಐತಿಹಾಸಿಕ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ತನ್ನ ಓಟವನ್ನು ಮುಂದುವರಿಸಿರುವ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ರಾಡ್ ಲೇವರ್ ಅರೆನಾದಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಸರ್ಬಿಯ ಆಟಗಾರ ಜೊಕೊವಿಕ್ ಫ್ರೆಂಚ್ ಎದುರಾಳಿ ಅಡ್ರಿಯಾನ್ ಮನ್ನಾರಿನೊರನ್ನು 6-0, 6-0, 6-3 ಸೆಟ್ಗಳ ಅಂತರದಿಂದ ಮಣಿಸಿದರು. ಮೆಲ್ಬರ್ನ್ ಪಾರ್ಕ್ ನಲ್ಲಿ 11ನೇ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇರಿಸಿದರು.
ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಯ್ 58ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿರುವ ಜೊಕೊವಿಕ್ ಪುರುಷರ ಸಿಂಗಲ್ಸ್ ನಲ್ಲಿ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ನಿರ್ಮಿಸಿರುವ ದಾಖಲೆಯನ್ನು ಸರಿಗಟ್ಟಿದರು. ಕ್ರೀಡೆಯ ಮೇಲೆ ಬಿಗಿ ಹಿಡಿತ ಸಾಧಿಸಿದರು.
ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ನಲ್ಲಿ ಸತತ 32ನೇ ಪಂದ್ಯವನ್ನು ಜಯಿಸಿದ್ದಾರೆ. 2018ರಲ್ಲಿ ದಕ್ಷಿಣ ಕೊರಿಯಾದ ಚುಂಗ್ ಹಿಯೊನ್ ಗೆ ಶರಣಾದ ನಂತರ ಜೊಕೊವಿಕ್ ಸೋಲನ್ನು ಎದುರಿಸಿಲ್ಲ. 10 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಜೊಕೊವಿಕ್ ಕೊರೋನ ವೈರಸ್ ವ್ಯಾಕ್ಸಿನೇಶನ್ ಗೆ ಸಂಬಂಧಿಸಿ 2022ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸ್ಧರ್ಧಿಸದೆ ಹೊರಗುಳಿದಿದ್ದರು.
ಮನ್ನಾರಿಯೊ 2023ರಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದ ಹೊರತಾಗಿಯೂ ಅಗ್ರ ಶ್ರೇಯಾಂಕದ ಜೊಕೊವಿಕ್ ಪ್ರಾಬಲ್ಯದ ಎದುರು ಮಂಕಾಗಿ ಕಂಡುಬಂದರು.
ಜ್ವರದ ಕಾರಣ 2024ರ ಆಸ್ಟ್ರೇಲಿಯನ್ ಓಪನ್ ನಲ್ಲಿ ನಿಧಾನವಾಗಿ ತನ್ನ ಅಭಿಯಾನ ಆರಂಭಿಸಿದ ಹೊರತಾಗಿಯೂ 36ರ ವಯಸ್ಸಿನ ಜೊಕೊವಿಕ್ ಎಲ್ಲ ಸವಾಲನ್ನು ಮೆಟ್ಟಿ ನಿಂತು ಟೂರ್ನಮೆಂಟ್ ಮುಂದುವರಿದಂತೆ ಉತ್ತಮ ಪ್ರದರ್ಶನ ನೀಡಿದ್ದಾರೆ.
ಹಾಲಿ ಚಾಂಪಿಯನ್ ಜೊಕೊವಿಕ್ ಅಂತಿಮ-8ರ ಸುತ್ತಿನಲ್ಲಿ ಅಮೆರಿಕದ ಟೇಲರ್ ಫ್ರಿಟ್ಝ್ ಸವಾಲನ್ನು ಎದುರಿಸಲಿದ್ದಾರೆ.
12ನೇ ಶ್ರೇಯಾಂಕದ ಫ್ರಿಟ್ಝ್ ರವಿವಾರ 3 ಗಂಟೆಗೂ ಅಧಿಕ ಸಮಯ ನಡೆದ ಪುರುಷರ ಸಿಂಗಲ್ಸ್ ಪಂದ್ಯದ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಗ್ರೀಕ್ನ 7ನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್ಸಿಪಾಸ್ರನ್ನು 7-6(7/3), 5-7, 6-3, 6-3 ಸೆಟ್ಗಳ ಅಂತರದಿಂದ ಮಣಿಸಿದರು.
ಟೇಲರ್ ಫ್ರಿಟ್ಝ್ ಅಗ್ರ ಶ್ರೇಯಾಂಕದ ಜೊಕೊವಿಕ್ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ 0-8ರಿಂದ ಹಿನ್ನಡೆಯಲ್ಲಿದ್ದರೂ ಮುಂದಿನ ಸುತ್ತಿನಲ್ಲಿ ತನ್ನ ಪ್ರದರ್ಶನ ಸುಧಾರಿಸಿಕೊಂಡು, ಮತ್ತೊಮ್ಮೆ ಕಾಳಗಕ್ಕೆ ಸಜ್ಜಾಗುವೆ ಎಂದು ಹೇಳಿದ್ದಾರೆ.