ಆಸ್ಟ್ರೇಲಿಯನ್ ಓಪನ್ | ರೋಹನ್ ಬೋಪಣ್ಣ-ನಿಕೊಲಸ್ ಜೋಡಿಗೆ ಸೋಲು
ರೋಹನ್ ಬೋಪಣ್ಣ | PC : PTI
ಮೆಲ್ಬರ್ನ್: ವಿಶ್ವದ ಮಾಜಿ ನಂ.1 ಆಟಗಾರ ರೋಹನ್ ಬೋಪಣ್ಣ ಹಾಗೂ ಅವರ ಕೊಲಂಬಿಯಾದ ಜೊತೆಗಾರ ನಿಕೊಲಸ್ ಬ್ಯಾರಿಯೆಂಟೋಸ್ ಆಸ್ಟ್ರೇಲಿಯನ್ ಓಪನ್ನಲ್ಲಿ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿಯೇ ಸೋತಿದ್ದಾರೆ.
ಮಂಗಳವಾರ ಸುಮಾರು 2 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಬೋಪಣ್ಣ ಹಾಗೂ ಬ್ಯಾರಿಯೆಂಟೋಸ್ ಸ್ಪೇನ್ನ ಪೆಡ್ರೊ ಮಾರ್ಟಿನೆಝ್ ಹಾಗೂ ಜೌಮ್ ಮುನಾರ್ ಎದುರು 5-7, 5-7(5)ಅಂತರದಿಂದ ಸೋತಿದ್ದಾರೆ.
14ನೇ ಶ್ರೇಯಾಂಕದ ಇಂಡೋ-ಕೊಲಂಬಿಯಾದ ಜೋಡಿ ಉತ್ತಮ ಆರಂಭ ಪಡೆದಿತ್ತು. ಆದರೆ, ಪ್ರಮುಖ ಹಂತದಲ್ಲಿ ಮುಗ್ಗರಿಸಿ ಸ್ಪೇನ್ ಜೋಡಿಗೆ ಅವಕಾಶ ಬಿಟ್ಟುಕೊಟ್ಟಿತು.
ಆಸ್ಟ್ರೇಲಿಯದ ಮ್ಯಾಥ್ಯೂ ಎಬ್ಡೆನ್ರೊಂದಿಗೆ ಕಳೆದ ವರ್ಷ 44ರ ಹರೆಯದ ಬೋಪಣ್ಣ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಮುಕ್ತ ಯುಗದಲ್ಲಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಹಿರಿಯ ವಯಸ್ಸಿನ ಆಟಗಾರ (43 ವರ್ಷ)ಎನಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದ್ದರು.
ಕಳೆದ ವರ್ಷ ನವೆಂಬರ್ನಲ್ಲಿ ಎಟಿಪಿ ಫೈನಲ್ಸ್ ಟೂರ್ನಿಯ ನಂತರ ಬೋಪಣ್ಣ ಹಾಗೂ ಎಬ್ಡೆನ್ ಅವರ ಜೊತೆಗಾರಿಕೆ ಅಂತ್ಯವಾಗಿತ್ತು.
ಭಾರತದ ಅಗ್ರ ರ್ಯಾಂಕಿನ ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್ ಸೋಮವಾರ ನಡೆದ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ವಿಶ್ವದ ನಂ.25ನೇ ಆಟಗಾರ ಥಾಮಸ್ ಮಚಾಕ್ ಎದುರು ಸೋತಿದ್ದರು.