ಆಸ್ಟ್ರೇಲಿಯನ್ ಓಪನ್ | ಗಾಯಗೊಂಡು ನಿವೃತ್ತಿಯಾದ ನವೊಮಿ ಒಸಾಕಾ

ನವೊಮಿ ಒಸಾಕಾ | PC : NDTV
ಮೆಲ್ಬರ್ನ್: ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ನವೊಮಿ ಒಸಾಕಾ ಶುಕ್ರವಾರ ಬೆಲಿಂಡಾ ಬೆನ್ಸಿಕ್ ವಿರುದ್ಧ ನಡೆದ ಮೂರನೇ ಸುತ್ತಿನ ಪಂದ್ಯದ ವೇಳೆ ಗಾಯಗೊಂಡು ನಿವೃತ್ತಿಯಾಗಿದ್ದಾರೆ.
ಆರಂಭಿಕ ಸೆಟ್ನಲ್ಲಿ 6-5 ಮುನ್ನಡೆಯಲ್ಲಿದ್ದಾಗ ವೈದ್ಯಕೀಯ ಉಪಚಾರ ಪಡೆದ ಜಪಾನ್ ಆಟಗಾರ್ತಿ ತನ್ನ ಸ್ವಿಸ್ ಎದುರಾಳಿ ಬೆನ್ಸಿಕ್ ಎದುರು ಟೈ-ಬ್ರೇಕರ್ನಲ್ಲಿ ಸೋತರು. ಪಂದ್ಯವನ್ನು ಮುಂದುವರಿಸಲು ಅಶಕ್ತರಾದ ಒಸಾಕಾ ಅವರು ಬೆನ್ಸಿಕ್ ಕೈಯನ್ನು ಕುಲುಕಿ ಟೆನಿಸ್ ಅಂಗಣದಿಂದ ಹೊರ ನಡೆದರು.
ಈ ವರ್ಷದ ಮೊದಲ ಗ್ರ್ಯಾನ್ಸ್ಲಾಮ್ ಟೂರ್ನಿಗಿಂತ ಮೊದಲೆ ಒಸಾಕಾ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದು, ಉದರ ಬೇನೆಯಿಂದಾಗಿ ಆಕ್ಲೆಂಡ್ ಫೈನಲ್ನಿಂದ ಹಿಂದೆ ಸರಿದಿದ್ದರು.
ತನ್ನ ಗೆಳೆಯ ಕೊರ್ಡೆ ಜೊತೆಗಿನ ಸಂಬಂಧ ಮುರಿದುಬಿದ್ದಿರುವುದಾಗಿ ಕಳೆದ ವಾರ ಬಹಿರಂಗಪಡಿಸಿದ್ದ ಒಸಾಕಾ ತನ್ನ ಗಾಯವು ಗುಣಮುಖವಾಗುತ್ತಿದೆ ಎಂದು ಹೇಳಿಕೊಂಡು ಮೆಲ್ಬರ್ನ್ಗೆ ಆತ್ಮವಿಶ್ವಾಸದಿಂದ ಬಂದಿದ್ದರು.
ಕರೋಲಿನ್ ಗಾರ್ಸಿಯಾ ಹಾಗೂ ಕರೋಲಿನಾ ಮುಚೋವಾ ವಿರುದ್ಧ ಸುಲಭ ಜಯ ಸಾಧಿಸಿರುವ ನಾಲ್ಕು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಒಸಾಕಾ ತನ್ನ ಮಗಳಿಗೆ ಜನ್ಮನೀಡಿದ ನಂತರ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಮೂರನೇ ಸುತ್ತು ತಲುಪಿದ್ದರು.