ಆಸ್ಟ್ರೇಲಿಯನ್ ಓಪನ್ | ಜೊಕೊವಿಕ್, ಝ್ವೆರೆವ್, ಅಲ್ಕರಾಝ್, ಪೌಲ್ ಕ್ವಾರ್ಟರ್ ಫೈನಲ್ಗೆ

ನೊವಾಕ್ ಜೊಕೊವಿಕ್ | PTI
ಮೆಲ್ಬರ್ನ್: ನೊವಾಕ್ ಜೊಕೊವಿಕ್, ಅಲೆಕ್ಸಾಂಡರ್ ಝ್ವೆರೆವ್, ಕಾರ್ಲೊಸ್ ಅಲ್ಕರಾಝ್ ಹಾಗೂ ಟಾಮಿ ಪೌಲ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 10 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೊಕೊವಿಕ್ ಝೆಕ್ ಆಟಗಾರ ಜಿರಿ ಲೆಹೆಕಾರನ್ನು 6-3, 6-4, 7-6(7/4)ಸೆಟ್ಗಳ ಅಂತರದಿಂದ ಮಣಿಸಿದರು. ಈ ಗೆಲುವಿನ ಮೂಲಕ 15ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದ ಜೊಕೊವಿಕ್ ಅವರು ರೋಜರ್ ಫೆಡರರ್ರೊಂದಿಗೆ ದಾಖಲೆ ಹಂಚಿಕೊಂಡರು.
ಜೊಕೊವಿಕ್ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ 61ನೇ ಬಾರಿ ಅಂತಿಮ-8ರ ಘಟ್ಟಕ್ಕೇರಿದ್ದಾರೆ. ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಜೊಕೊವಿಕ್ ಮಂಗಳವಾರ ನಡೆಯಲಿರುವ ಕ್ವಾರ್ಟರ್ ಫೈನಲ್ನಲ್ಲಿ 3ನೇ ಶ್ರೇಯಾಂಕದ ಅಲ್ಕರಾಝ್ರನ್ನು ಎದುರಿಸಲಿದ್ದಾರೆ.
ಜರ್ಮನಿಯ ಝ್ವೆರೆವ್ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಫ್ರಾನ್ಸ್ನ ಉಗೊ ಹಂಬರ್ಟ್ರನ್ನು 6-1, 2-6, 6-3, 6-2 ನೇರ ಸೆಟ್ಗಳ ಅಂತರದಿಂದ ಮಣಿಸಿದರು.
ತನ್ನ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಚಿತ್ತಹರಿಸಿರುವ ಝ್ವೆರೆವ್ ಮುಂದಿನ ಸುತ್ತಿನಲ್ಲಿ ಅಮೆರಿಕದ 12ನೇ ಶ್ರೇಯಾಂಕದ ಟಾಮಿ ಪೌಲ್ರನ್ನು ಎದುರಿಸಲಿದ್ದಾರೆ.
ಪೌಲ್ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸ್ಪೇನ್ನ 14ನೇ ಶ್ರೇಯಾಂಕದ ಅಲೆಜಾಂಡ್ರೊ ಡೇವಿಡೋವಿಚ್ ಫೊಕಿನಾರನ್ನು 6-1, 6-1, 6-1 ನೇರ ಸೆಟ್ಗಳ ಅಂತರದಿಂದ ಮಣಿಸಿದರು.
ಅಮೋಘ ಪ್ರದರ್ಶನ ನೀಡಿದ ಪೌಲ್ ಮೂರನೇ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು.
ಪೌಲ್ 2023ರಲ್ಲಿ ಮೆಲ್ಬರ್ನ್ನಲ್ಲಿ ಸೆಮಿ ಫೈನಲ್ ತಲುಪಿದ್ದು ಶ್ರೇಷ್ಠ ಸಾಧನೆಯಾಗಿದೆ. 2009ರ ನಂತರ ಈ ಸಾಧನೆ ಮಾಡಿದ ಅಮೆರಿಕದ ಮೊದಲ ಆಟಗಾರ ಎನಿಸಿಕೊಂಡಿದ್ದರು.
27ರ ಹರೆಯದ ಝ್ವೆರೆವ್ ಸದ್ಯ ಶ್ರೇಷ್ಠ ಫಾರ್ಮ್ನಲ್ಲಿದ್ದು, ವಿಶ್ವ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇಂದು ಅವರು ಮೆಲ್ಬರ್ನ್ನಲ್ಲಿ ಸತತ ಎರಡನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಕಳೆದ ವರ್ಷ ಸೆಮಿ ಫೈನಲ್ಗೆ ತಲುಪಿದ್ದ ಝ್ವೆರೆವ್ ರಶ್ಯದ ಡೇನಿಯಲ್ ಮೆಡ್ವೆಡೆವ್ ವಿರುದ್ಧ ಸೋತಿದ್ದಾರೆ.
ಝ್ವೆರೆವ್ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ 14 ಬಾರಿ ಕ್ವಾರ್ಟರ್ ಫೈನಲ್ ತಲುಪಿದ ಹೊರತಾಗಿಯೂ 10 ವರ್ಷಗಳಿಂದ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಅವರು ಯಶಸ್ಸು ಕಂಡರೆ, 1996ರ ನಂತರ ಗ್ರ್ಯಾನ್ಸ್ಲಾಮ್ ಗೆದ್ದಿರುವ ಜರ್ಮನಿಯ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಬೊರಿಸ್ ಬೆಕೆರ್ 1996ರಲ್ಲಿ ಈ ಸಾಧನೆ ಮಾಡಿದ್ದರು.
15ನೇ ಶ್ರೇಯಾಂಕದ ಜಾಕ್ ಡ್ರಾಪರ್ ಅಂತಿಮ-16ರ ಪಂದ್ಯದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಸ್ಪೇನ್ ಆಟಗಾರ ಕಾರ್ಲೊಸ್ ಅಲ್ಕರಾಝ್ ಸತತ ಎರಡನೇ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಬ್ರಿಟನ್ ಆಟಗಾರ ಡ್ರಾಪರ್ ಸ್ಪರ್ಧೆಯಿಂದ ಹಿಂದೆ ಸರಿದಾಗ ಅಲ್ಕರಾಝ್ ಅವರು ಪಂದ್ಯದಲ್ಲಿ 7-5, 6-1 ಸೆಟ್ಗಳಿಂದ ಮುನ್ನಡೆಯಲ್ಲಿದ್ದರು.
15ನೇ ಶ್ರೇಯಾಂಕದ ಡ್ರಾಪರ್ ಈ ಹಿಂದಿನ ಪಂದ್ಯಗಳಲ್ಲಿ ಮೂರು ಬಾರಿ ಐದು ಸೆಟ್ಗಳಿಂದ ಜಯ ಸಾಧಿಸಿದ್ದರು. ಪ್ರತಿ ಬಾರಿಯೂ ಪುಟಿದೆದ್ದಿದ್ದರು. ಆದರೆ ಇಂದು ಅವರ ಆಟ ನೀರಸವಾಗಿತ್ತು.
ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ಸರ್ಬಿಯದ ನೊವಾಕ್ ಜೊಕೊವಿಕ್ ಅವರ ಸವಾಲನ್ನು ಎದುರಿಸಲಿದ್ದಾರೆ.
4 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಪೈಕಿ ಅಲ್ಕರಾಝ್ ಅವರು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಈ ತನಕ ಗೆದ್ದಿಲ್ಲ. ಈ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನು ಈ ವರೆಗೆ ದಾಟಿಲ್ಲ.
► ಸಬಲೆಂಕಾ ಕ್ವಾರ್ಟರ್ ಫೈನಲ್ಗೆ
ಇದೇ ವೇಳೆ ರವಿವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಯುವ ಆಟಗಾರ್ತಿ ಮಿರ್ರಾ ಆಂಡ್ರೀವಾ ವಿರುದ್ಧ ಪ್ರಾಬಲ್ಯ ಸಾಧಿಸಿರುವ ಅರಿನಾ ಸಬಲೆಂಕಾ ಅವರು ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಬೆಲಾರುಸ್ ಆಟಗಾರ್ತಿ ರಶ್ಯದ 17ರ ಹರೆಯದ ಆಂಡ್ರೀವಾರನ್ನು ಕೇವಲ 62 ನಿಮಿಷಗಳ ಹೋರಾಟದಲ್ಲಿ 6-1, 6-2 ಸೆಟ್ಗಳಿಂದ ಮಣಿಸಿದರು. ಮೆಲ್ಬರ್ನ್ ಪಾರ್ಕ್ನಲ್ಲಿ ಗೆಲುವಿನ ಓಟವನ್ನು 18 ಪಂದ್ಯಗಳಿಗೆ ವಿಸ್ತರಿಸಿದರು.
ಸಬಲೆಂಕಾ ತನ್ನ ಹಿಂದಿನ ಪಂದ್ಯಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದು, ಹಲವು ಸರ್ವ್ ಕೈಚೆಲ್ಲಿದ್ದರು. ಆದರೆ ಆಂಡ್ರೀವಾ ವಿರುದ್ಧ ಅಂತಹ ಯಾವುದೇ ಕಠಿಣ ಪರಿಸ್ಥಿತಿಗಳನ್ನು ಎದುರಿಸಲಿಲ್ಲ.
ಸತತ 3ನೇ ಬಾರಿ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿರುವ ಹಾಲಿ ಚಾಂಪಿಯನ್ ಸಬಲೆಂಕಾ ಮುಂದಿನ ಸುತ್ತಿನಲ್ಲಿ ಕ್ರೊಯೇಶಿಯದ ಡೊನ್ನಾ ವೆಟಿಕ್ ಅಥವಾ ರಶ್ಯದ ಅನಸ್ಟೇಸಿಯ ಪಾವ್ಲಚೆಂಕೋವಾರನ್ನು ಎದುರಿಸಲಿದ್ದಾರೆ.
ಅಮೆರಿಕದ ಟೆನಿಸ್ ಸ್ಟಾರ್ ಕೊಕೊ ಗೌಫ್ ಅವರು ಬೆಲಿಂಡಾ ಬೆನ್ಸಿಕ್ ವಿರುದ್ಧ 5-7, 6-2, 6-1 ಸೆಟ್ಗಳ ಅಂತರದಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಗೆಲುವಿನ ನಂತರ ಟಿವಿ ಕ್ಯಾಮರಾ ಲೆನ್ಸ್ನಲ್ಲಿ ಆರ್ಐಪಿ ಟಿಕ್ಟಾಕ್ ಯುಎಸ್ಎ ಎಂದು ಬರೆದು,ಹೃದಯದ ಚಿತ್ರ ಬಿಡಿಸಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡರು.
ಶನಿವಾರ ಅಮೆರಿಕದಲ್ಲಿ ಟಿಕ್ಟಾಕ್ ಅನ್ನು ಪ್ರಮುಖ ಆ್ಯಪ್ ಸ್ಟೋರ್ಸ್ನಿಂದ ತೆಗೆದುಹಾಕಿದ ನಂತರ ಗೌಫ್ ಈ ಸಂದೇಶ ಬರೆದಿದ್ದಾರೆ.