ಆಸ್ಟ್ರೇಲಿಯನ್ ಓಪನ್ | ಸಿನ್ನರ್, ಸ್ವಿಯಾಟೆಕ್, ಸ್ವಿಟೋಲಿನಾ ಅಂತಿಮ-8ರ ಘಟ್ಟಕ್ಕೆ ಲಗ್ಗೆ

ಜನ್ನಿಕ್ ಸಿನ್ನರ್ | PC : NDTV
ಮೆಲ್ಬರ್ನ್: ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್, ವಿಶ್ವದ ನಂ.2ನೇ ಆಟಗಾರ್ತಿ ಇಗಾ ಸ್ವಿಯಾಟೆಕ್ ಹಾಗೂ ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಮೆಲ್ಬರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ-8ರ ಘಟ್ಟವನ್ನು ತಲುಪಿದ್ದಾರೆ.
ರಾಡ್ ಲೆವರ್ ಅರೆನಾದಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಇಟಲಿಯ ಆಟಗಾರ ಸಿನ್ನರ್ ಒಂದು ಸೆಟ್ನಲ್ಲಿ ಸೋಲುಂಡಿದ್ದರೂ ಡೆನ್ಮಾರ್ಕ್ ಆಟಗಾರ ಹೊಲ್ಗರ್ ರೂನ್ರನ್ನು 6-3, 3-6, 6-3, 6-2 ಸೆಟ್ಗಳ ಅಂತರದಿಂದ ಮಣಿಸಿದರು.
ಇದಕ್ಕೂ ಮೊದಲು 4ನೇ ಸೆಟ್ನಲ್ಲಿ ಸಿನ್ನರ್ ಅವರ ಶಕ್ತಿಶಾಲಿ ಸರ್ವ್ಗೆ ಲೋಹದ ನೆಟ್ ಮುರಿದು ಬಿತ್ತು. ಆಗ 20 ನಿಮಿಷ ಪಂದ್ಯ ಸ್ಥಗಿತಗೊಂಡಿತು. ಟೆನಿಸ್ ನೆಟ್ ತುಂಡಾದ ನಂತರ ಲಭಿಸಿರುವ ದೀರ್ಘ ವಿರಾಮವು ನನಗೆ ಅನುಕೂಲವಾಯಿತು ಎಂದು ಸಿನ್ನರ್ ಹೇಳಿದ್ದಾರೆ.
ಮೂರು ಗ್ರ್ಯಾನ್ಸ್ಲಾಮ್ ಕಿರೀಟ ಧರಿಸಿದ ಇಟಲಿಯ ಮೊದಲ ಆಟಗಾರನಾಗುವ ಗುರಿ ಇಟ್ಟುಕೊಂಡಿರುವ 23ರ ಹರೆಯದ ಸಿನ್ನರ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ರಶ್ಯದ ಮೆಡ್ವೆಡೆವ್ರನ್ನು ಮಣಿಸಿ ತನ್ನ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.
*ಮೊನ್ಫಿಲ್ಸ್ಗೆ ಶಾಕ್ ನೀಡಿದ ಶೆಲ್ಟನ್: ಅಮೆರಿಕ ಆಟಗಾರ ಬೆನ್ ಶೆಲ್ಟನ್ ಫ್ರೆಂಚ್ನ ಹಿರಿಯ ಆಟಗಾರ ಮೊನ್ಫಿಲ್ಸ್ರನ್ನು ಸೋಲಿನ ಶಾಕ್ ನೀಡಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 22ರ ಹರೆಯದ ಶೆಲ್ಟನ್ ಅವರು 38ರ ವಯಸ್ಸಿನ ಮೊನ್ಫಿಲ್ಸ್ರನ್ನು 7-6(7/3), 6-7(3/7), 7-6(7/2) ಸೆಟ್ಗಳ ಅಂತರದಿಂದ ಮಣಿಸಿದರು.
ಶೆಲ್ಟನ್ ಮುಂದಿನ ಸುತ್ತಿನಲ್ಲಿ ಇಟಲಿ ಆಟಗಾರ ಲೊರೆಂರೊ ಸೊನೆಗೊರನ್ನು ಎದುರಿಸಲಿದ್ದಾರೆ. ತನ್ನ 26ನೇ ಪ್ರಯತ್ನದಲ್ಲಿ ಇದೇ ಮೊದಲ ಬಾರಿ ಸೊನೆಗೊ ಕ್ವಾ.ಫೈನಲ್ ತಲುಪಿದ್ದಾರೆ.
ಸೊನೆಗೊ ಅಮೆರಿಕದ 19ರ ಹರೆಯದ ಆಟಗಾರ ಲರ್ನರ್ ಟಿಯೆನ್ರನ್ನು 6-3, 6-2, 3-6, 6-1 ಸೆಟ್ಗಳ ಅಂತರದಿಂದ ಸೋಲಿಸಿದರು.
ಇದೇ ವೇಳೆ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5 ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಇಗಾ ಸ್ವಿಯಾಟೆಕ್ ಜರ್ಮನಿ ಆಟಗಾರ್ತಿ ಇವಾ ಲೀಸ್ ಅವರನ್ನು 6-0, 6-1 ಸೆಟ್ಗಳ ಅಂತರದಿಂದ ಮಣಿಸಿದರು.
ಈ ಸೋಲಿನೊಂದಿಗೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಲೀಸ್ ಅವರ ಮಹತ್ವದ ಪಯಣ ಅಂತ್ಯಗೊಂಡಿತು.
ಸ್ವಿಯಾಟೆಕ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಮ್ಮಾ ನವಾರ್ರೊ ಅಥವಾ ಡರಿಯಾ ಕಾಸಟ್ಕಿನಾರನ್ನು ಎದುರಿಸಲಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಪರದಾಟ ನಡೆಸಿರುವ ಸ್ವಿಯಾಟೆಕ್ 2022ರಲ್ಲಿ ಮಾತ್ರ ಸೆಮಿ ಫೈನಲ್ಗೆ ತಲುಪಿದ್ದರು. ಈ ವರ್ಷ ತನ್ನ ಲಯವನ್ನು ಕಂಡುಕೊಂಡಿದ್ದಾರೆ.
ವಿಶ್ವದ 128ನೇ ರ್ಯಾಂಕಿನ ಆಟಗಾರ್ತಿ ಲೀಸ್ ಟೂರ್ನಿಯ ಅರ್ಹತಾ ಸುತ್ತುಗಳಲ್ಲಿ ಸೋತಿದ್ದರು. ಅನ್ನಾ ಕಾಲಿನ್ಸ್ಕಾಯಾ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಅದೃಷ್ಟವಶಾತ್ ಪ್ರಧಾನ ಸುತ್ತಿನಲ್ಲಿ ಆಡುವ ಅವಕಾಶ ಪಡೆದರು. ಲೀಸ್ ಅರ್ಹತಾ ಸುತ್ತಿನಲ್ಲಿ ಸೋತಿದ್ದರೂ 1998ರ ನಂತರ ಆಸ್ಟ್ರೇಲಿಯನ್ ಓಪನ್ನಲ್ಲಿ 4ನೇ ಸುತ್ತು ತಲುಪಿದ ಮೊದಲ ಆಟಗಾರ್ತಿ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ.
*ಸ್ವಿಟೋಲಿನಾಗೆ ಮ್ಯಾಡಿಸನ್ ಎದುರಾಳಿ: ಮಹಿಳೆಯರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ 20 ನಿಮಿಷಗಳ ಆಟದಲ್ಲಿ ಹಿನ್ನಡೆ ಕಂಡಿದ್ದ ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ರಶ್ಯದ ವೆರೋನಿಕಾ ಕುಡೆರ್ಮೆಟೋವಾರನ್ನು 6-4, 6-1 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ 3ನೇ ಬಾರಿ ಅಂತಿಮ-8ರ ಸುತ್ತು ಪ್ರವೇಶಿಸಿದರು.
30ರ ಹರೆಯದ ಸ್ವಿಟೋಲಿನಾ ಮೊದಲ ಸೆಟ್ನಲ್ಲಿ 1-4ರಿಂದ ಹಿನ್ನಡೆಯಲ್ಲಿದ್ದರು. ಮುಂದಿನ 5 ಗೇಮ್ಗಳಲ್ಲಿ ತನ್ನ ಆಕ್ರಮಣಕಾರಿ ಆಟ ಆಡಿದರು. ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ 12ನೇ ಬಾರಿ ಕ್ಟಾರ್ಟರ್ ಫೈನಲ್ ತಲುಪಿದರು.
ಸ್ವಿಟೋಲಿನಾ ಮುಂದಿನ ಸುತ್ತಿನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ರನ್ನು ಎದುರಿಸಲಿದ್ದಾರೆ. ಕೀಸ್ ಕಝಕ್ಸ್ತಾನದ 6ನೇ ಶ್ರೇಯಾಂಕಿತೆ ಎಲೆನಾ ರೈಬಾಕಿನಾರನ್ನು 6-3, 1-6, 6-3 ಸೆಟ್ಗಳಿಂದ ಮಣಿಸಿದರು.
ನೆಟ್ನಲ್ಲಿ ಕೈ ಕುಲುಕದ ಸ್ವಿಟೋಲಿನಾ ಪಂದ್ಯ ನಂತರದ ಸಂಪ್ರದಾಯವನ್ನು ಬಹಿಷ್ಕರಿಸುವುದನ್ನು ಮುಂದುವರಿಸಿದರು. 2022ರಲ್ಲಿ ತಮ್ಮ ದೇಶದ ಮೇಲೆ ರಶ್ಯ ದೇಶ ಆಕ್ರಮಣ ಮಾಡಿದ ನಂತರ ರಶ್ಯನ್ನರು ಹಾಗೂ ಬೆಲಾರುಸ್ ಆಟಗಾರ್ತಿಯರ ವಿರುದ್ದ ಆಡಿದ ನಂತರ ಉಕ್ರೇನ್ ಕ್ರೀಡಾಳುಗಳು ಕೈಲುಕದೆ ಇರಲು ನಿರ್ಧರಿಸಿದ್ದರು.