ಆಸ್ಟ್ರೇಲಿಯನ್ ಓಪನ್ | ಸೆಮಿ ಫೈನಲ್ ನಲ್ಲಿ ಸಿನ್ನರ್-ಶೆಲ್ಟನ್ ಸೆಣಸಾಟ

ಶೆಲ್ಟನ್ | PC : PTI
ಮೆಲ್ಬರ್ನ್ : ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಹಾಗೂ ಐದು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಇಗಾ ಸ್ವಿಯಾಟೆಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
ಬುಧವಾರ 1 ಗಂಟೆ, 48 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಇಟಲಿಯ ಹಾಲಿ ಚಾಂಪಿಯನ್ ಸಿನ್ನರ್ ಆಸ್ಟ್ರೇಲಿಯದ ಆಟಗಾರ ಅಲೆಕ್ಸ್ ಡಿ ಮಿನೌರ್ರನ್ನು 6-3, 6-2, 6-1 ಸೆಟ್ಗಳ ಅಂತರದಿಂದ ಮಣಿಸಿದರು.
ಸಿನ್ನರ್ ಶುಕ್ರವಾರ ನಡೆಯಲಿರುವ ಸೆಮಿ ಫೈನಲ್ನಲ್ಲಿ ಅಮೆರಿಕದ ಬೆನ್ ಶೆಲ್ಟನ್ರನ್ನು ಎದುರಿಸಲಿದ್ದಾರೆ.
ಮೊದಲ ಬಾರಿ ಸೆಮಿ ಫೈನಲ್ ತಲುಪಿದ ಶೆಲ್ಟನ್: ಇಟಲಿ ಆಟಗಾರ ಲೊರೆಂರೊ ಸೊನೆಗೊರನ್ನು ಸೋಲಿಸಿದ ಅಮೆರಿಕದ ಆಟಗಾರ ಬೆನ್ ಶೆಲ್ಟನ್ ಇದೇ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
ಶೆಲ್ಟನ್ ಬುಧವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಸೊನೆಗೊರನ್ನು 6-4, 7-5, 4-6, 7-6(4)ಸೆಟ್ಗಳ ಅಂತರದಿಂದ ಮಣಿಸಿದರು.
21ನೇ ಶ್ರೇಯಾಂಕದ ಶೆಲ್ಟನ್ ಮುಂದಿನ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ.
ಶೆಲ್ಟನ್ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ 2ನೇ ಬಾರಿ ಸೆಮಿ ಫೈನಲ್ ತಲುಪಿದ್ದಾರೆ. 2023ರ ಯು.ಎಸ್. ಓಪನ್ನಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದ ಅವರು ಆಗಿನ ಚಾಂಪಿಯನ್ ನೊವಾಕ್ ಜೊಕೊವಿಕ್ಗೆ ಸೋತಿದ್ದರು.
29 ರ ಹರೆಯದ ಸೊನೆಗೊ ಗ್ರ್ಯಾನ್ಸ್ಲಾಮ್ನಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪುವ ಹಾದಿಯಲ್ಲಿ 2014ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸ್ಟ್ಯಾನ್ ವಾವ್ರಿಂಕಾರನ್ನು ಸೋಲಿಸಿದ್ದರು. 4ನೇ ಸುತ್ತಿನಲ್ಲಿ ಯುವ ಆಟಗಾರ ಲರ್ನರ್ ಟಿಯೆನ್ರನ್ನು ಹಿಮ್ಮೆಟ್ಟಿಸಿದ್ದರು. ಟಿಯೆನ್ ರಶ್ಯದ 3 ಬಾರಿಯ ಫೈನಲಿಸ್ಟ್ ಮೆಡ್ವೆಡೆವ್ರನ್ನು ಮಣಿಸಿದ್ದರು.
ಸ್ವಿಯಾಟೆಕ್ ಸೆಮಿ ಫೈನಲ್ಗೆ, ಮ್ಯಾಡಿಸನ್ ಎದುರಾಳಿ: ಪೋಲ್ಯಾಂಡ್ ಆಟಗಾರ್ತಿ ಸ್ವಿಯಾಟೆಕ್ ಬುಧವಾರ ನಡೆದ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಎಮ್ಮಾ ನರ್ರಾರೊರನ್ನು 6-1, 6-2 ನೇರ ಸೆಟ್ಗಳ ಅಂತರದಿಂದ ಮಣಿಸಿದರು.
2022ರ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದು, ಸ್ವಿಯಾಟೆಕ್ರ ಈ ತನಕದ ಶ್ರೇಷ್ಠ ಸಾಧನೆಯಾಗಿದೆ. ಈ ಬಾರಿ ಸೆಮಿ ಫೈನಲ್ ಗಡಿ ದಾಟುವ ವಿಶ್ವಾಸದಲ್ಲಿದ್ದಾರೆ.
ಇದೇ ವೇಳೆ ಮತ್ತೊಂದು ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾರನ್ನು 3-6, 6-3, 6-4 ಸೆಟ್ಗಳ ಅಂತರದಿಂದ ಸೋಲಿಸಿದರು.
ಸತತ 10ನೇ ಪಂದ್ಯದಲ್ಲಿ ಜಯ ಸಾಧಿಸಿರುವ ಮ್ಯಾಡಿಸನ್ ದಶಕದ ನಂತರ 3ನೇ ಬಾರಿ ಸೆಮಿ ಫೈನಲ್ಗೆ ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ಸ್ವಿಯಾಟೆಕ್ರಿಂದ ಕಠಿಣ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಸ್ವಿಯಾಟೆಕ್ ಈ ವರೆಗೆ 5 ಪಂದ್ಯಗಳಲ್ಲಿ ಒಂದೂ ಸೆಟ್ಟನ್ನು ಕಳೆದುಕೊಂಡಿಲ್ಲ.
ಮ್ಯಾಡಿಸನ್ 2ನೇ ಶ್ರೇಯಾಂಕದ ಸ್ವಿಯಾಟೆಕ್ ವಿರುದ್ಧ ಆಡಿರುವ ಹಿಂದಿನ 3 ಗ್ರ್ಯಾನ್ಸ್ಲಾಮ್ ಪಂದ್ಯಗಳಲ್ಲಿ 2 ಬಾರಿ ಸೋತಿದ್ದಾರೆ. ತೀರಾ ಇತ್ತೀಚೆಗೆ 2019ರ ಯು.ಎಸ್. ಓಪನ್ನಲ್ಲಿ 4ನೇ ಸುತ್ತಿನಲ್ಲಿ ಸೋಲುಂಡಿದ್ದರು.