ಆಸ್ಟ್ರೇಲಿಯನ್ ಓಪನ್ | ಅಮೆರಿಕದ ಮ್ಯಾಡಿಸನ್ ಮುಡಿಗೆ ಚೊಚ್ಚಲ ಪ್ರಶಸ್ತಿ
ಸಬಲೆಂಕಾಗೆ ಆಘಾತಕಾರಿ ಸೋಲು, ಹ್ಯಾಟ್ರಿಕ್ ಕನಸು ಭಗ್ನ

ಮ್ಯಾಡಿಸನ್ | PC: PTI
ಮೆಲ್ಬರ್ನ್: ಎರಡು ಬಾರಿಯ ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾಗೆ ಸೋಲಿನ ಆಘಾತ ನೀಡಿದ ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಸ್ ವೃತ್ತಿಜೀವನದಲ್ಲಿ ತನ್ನ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಈ ಮೂಲಕ 26 ವರ್ಷಗಳ ನಂತರ ಮೆಲ್ಬರ್ನ್ ಪಾರ್ಕ್ನಲ್ಲಿ ಸತತ 3ನೇ ಸಿಂಗಲ್ಸ್ ಕಿರೀಟ ಧರಿಸಿದ ಮೊದಲ ಆಟಗಾರ್ತಿ ಎನಿಸಿಕೊಳ್ಳುವ ಸಬಲೆಂಕಾರ ಕನಸನ್ನು ಮ್ಯಾಡಿಸನ್ ನುಚ್ಚುನೂರು ಮಾಡಿದರು.
ಗುರುವಾರ ನಡೆದ ಸೆಮಿ ಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ಗೆ ಸೋಲುಣಿಸಿ ಟೂರ್ನಿಯಿಂದ ಹೊರ ಹಾಕಿದ್ದ ಮ್ಯಾಡಿಸನ್ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಸಬಲೆಂಕಾರನ್ನು 6-3, 2-6, 7-5 ಸೆಟ್ಗಳ ಅಂತರದಿಂದ ಮಣಿಸಿ ದೈತ್ಯ ಸಂಹಾರಿ ಎನಿಸಿಕೊಂಡರು.
ಮ್ಯಾಡಿಸನ್ 2005ರ ನಂತರ ಮೆಲ್ಬರ್ನ್ ಪಾರ್ಕ್ನಲ್ಲಿ ಇಬ್ಬರು ಅಗ್ರಮಾನ್ಯ ಡಬ್ಲ್ಯುಟಿಎ ಆಟಗಾರ್ತಿಯರನ್ನು ಮಣಿಸಿದ ಅಮೆರಿಕದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. 20 ವರ್ಷಗಳ ಹಿಂದೆ ಸೆರೆನಾ ವಿಲಿಯಮ್ಸ್ ಈ ಸಾಧನೆ ಮಾಡಿದ್ದರು.
ಸದ್ಯ ವಿಶ್ವ ಟೆನಿಸ್ ರ್ಯಾಂಕಿಂಗ್ನಲ್ಲಿ 14ನೇ ಸ್ಥಾನದಲ್ಲಿರುವ, 19ನೇ ಶ್ರೇಯಾಂಕಿತ ಆಟಗಾರ್ತಿ ಮ್ಯಾಡಿಸನ್ ಇಂದು ವೃತ್ತಿಬದುಕಿನಲ್ಲಿ ಎರಡನೇ ಬಾರಿ ಪ್ರಮುಖ ಟೂರ್ನಿಯಲ್ಲಿ ಫೈನಲ್ ಪಂದ್ಯವನ್ನು ಆಡಿದರು. ಈ ಹಿಂದೆ 2017ರ ಯು.ಎಸ್. ಓಪನ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿದ್ದರೂ ರನ್ನರ್ಸ್ ಅಪ್ ಟ್ರೋಫಿಗೆ ತೃಪ್ತಿಪಟ್ಟಿದ್ದರು.
ಮ್ಯಾಡಿಸನ್ ಮಹಿಳೆಯರ ಸಿಂಗಲ್ಸ್ ಕಿರೀಟ ಧರಿಸಿದ ಹಿನ್ನೆಲೆಯಲ್ಲಿ ಸತತ ಮೂರನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಸಬಲೆಂಕಾರ ಕನಸು ಕೈಗೂಡಲಿಲ್ಲ. 1997ರಿಂದ 1999ರ ತನಕ ಮಾರ್ಟಿನಾ ಹಿಂಗಿಸ್ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ್ದರು. ಅದು ಹಿಂಗಿಸ್ ಅವರ 4ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಆಗಿತ್ತು.
ಸಬಲೆಂಕಾ 2023 ಹಾಗೂ 2024ರಲ್ಲಿ ಆಸ್ಟ್ರೇಲಿಯನ್ ಓಪನ್ನಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು. ಮೆಲ್ಬರ್ನ್ ಪಾರ್ಕ್ನಲ್ಲಿ ಸತತ 20 ಪಂದ್ಯಗಳನ್ನು ಜಯಿಸುವುದರೊಂದಿಗೆ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರ್ತಿಯಾಗಿದ್ದರು. ಆದರೆ ಸುಮಾರು 2 ಗಂಟೆಗಳ ಕಾಲ ನಡೆದ ಫೈನಲ್ ಫೈಟ್ನಲ್ಲಿ ಮ್ಯಾಡಿಸನ್ ಮ್ಯಾಜಿಕ್ ಮಾಡಿ ಪ್ರಶಸ್ತಿ ತನ್ನದಾಗಿಸಿಕೊಂಡರು.
ಕೀಸ್ ಅವರ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ಹಿಂದೆ 15 ವರ್ಷಗಳ ಶ್ರಮವಿದೆ. ತನ್ನ 14ನೇ ವಯಸ್ಸಿನಲ್ಲಿ ಚೊಚ್ಚಲ ಡಬ್ಲ್ಯುಟಿಎ ಟೂರ್ ಪಂದ್ಯ ಜಯಿಸಿದ್ದ ಕೀಸ್ ಭವಿಷ್ಯದ ನಂ.1 ಆಟಗಾರ್ತಿಯಾಗುವ ಭರವಸೆ ಮೂಡಿಸಿದ್ದರು.
ಕೀಸ್ ಮೆಲ್ಬರ್ನ್ ಪಾರ್ಕ್ನಲ್ಲಿ 10 ವರ್ಷಗಳ ಹಿಂದೆ ತನ್ನ 19ನೇ ವಯಸ್ಸಿನಲ್ಲಿ ಮೊದಲ ಬಾರಿ ಸೆಮಿ ಫೈನಲ್ಗೆ ತಲುಪಿದ್ದರು. ಇದೀಗ ಒಂದು ದಶಕದ ನಂತರ ಕೊನೆಗೂ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕೀಸ್ ಅವರು 1968ರಲ್ಲಿ ಮುಕ್ತ ಟೆನಿಸ್ ಯುಗ ಆರಂಭವಾದ ನಂತರ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ 4ನೇ ಹಿರಿಯ ವಯಸ್ಸಿನ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಸಬಲೆಂಕಾ ಅವರು 2023ರ ಯು.ಎಸ್. ಓಪನ್ ಸೆಮಿ ಫೈನಲ್ನಲ್ಲಿ ಮರು ಹೋರಾಟ ನೀಡಿ ಫೈನಲ್ಗೆ ತಲುಪುವ ಮೊದಲು ಮೊದಲ ಸೆಟ್ ಅನ್ನು 0-6 ಅಂತರದಿಂದ ಕಳೆದುಕೊಂಡಿದ್ದರು.