ಆಸ್ಟ್ರೇಲಿಯನ್ ಓಪನ್ | ಸಿನಿಯಾಕೋವಾ-ಟೌನ್ಸೆಂಡ್ಗೆ ಮಹಿಳೆಯರ ಡಬಲ್ಸ್ ಕಿರೀಟ
PC : PTI
ಮೆಲ್ಬರ್ನ್: ಜೆಲೆನಾ ಒಸ್ಟಾಪೆಂಕೊ ಹಾಗೂ ಸೀಹ್ ಸು-ವೀ ಅವರನ್ನು ಮಣಿಸಿದ ಅಗ್ರ ಶ್ರೇಯಾಂಕದ ಕಟೆರಿನಾ ಸಿನಿಯಾಕೋವಾ ಹಾಗೂ ಟೇಲರ್ ಟೌನ್ಸೆಂಡ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್ ಕಿರೀಟವನ್ನು ಧರಿಸಿದ್ದಾರೆ.
ರವಿವಾರ ಎರಡು ಗಂಟೆ, 27 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಸಿನಿಯಾಕೋವಾ ಹಾಗೂ ಟೌನ್ಸೆಂಡ್ ಅವರು ಒಸ್ಟಾಪೆಂಕೊ ಹಾಗೂ ಸು-ವೀ ಅವರನ್ನು 6-2, 6-7(4), 6-3 ಸೆಟ್ಗಳ ಅಂತರದಿಂದ ಮಣಿಸಿದರು.
ಕಳೆದ ವರ್ಷ ವಿಂಬಲ್ಡನ್ ಚಾಂಪಿಯನ್ಶಿಪ್ ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದ ಸಿನಿಯಾಕೋವಾ ಹಾಗೂ ಟೌನ್ಸೆಂಡ್ ಇದೀಗ ಎರಡನೇ ಬಾರಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
ಡಬಲ್ಸ್ ವಿಭಾಗದ ವಿಶ್ವದ ನಂ.1 ಆಟಗಾರ್ತಿ ಸಿನಿಯಾಕೋವಾ ವೃತ್ತಿಜೀವನದಲ್ಲಿ 10ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಮಹತ್ವದ ಮೈಲಿಗಲ್ಲು ತಲುಪಿದರು.
2012ರಲ್ಲಿ ಜೂನಿಯರ್ ಮಟ್ಟದಲ್ಲಿ ಮೆಲ್ಬರ್ನ್ನಲ್ಲಿ ಪ್ರಶಸ್ತಿ ಜಯಿಸಿದ್ದ ಅಮೆರಿಕದ ಆಟಗಾರ್ತಿ ಟೌನ್ಸೆಂಡ್ ಇದೀಗ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಬಾಚಿಕೊಂಡರು.
‘‘ಇದು ನನ್ನ ಪಾಲಿಗೆ ಅತ್ಯಂತ ವಿಶೇಷವಾದುದು. ಕೊನೆಯ ಬಾರಿ ಮೆಲ್ಬರ್ನ್ನಲ್ಲಿ ಆಡಿದ್ದಾಗ ನನಗೆ 15 ವರ್ಷ ವಯಸ್ಸಾಗಿತ್ತು. ಈ ಹಂತದಲ್ಲಿ ಆಡಲು ಸಾಧ್ಯವಾಗುತ್ತದೆ ಎಂದು ನಾನು ಯೋಚಿಸಿಯೇ ಇರಲಿಲ್ಲ’’ ಎಂದು ಟೌನ್ಸೆಂಡ್ ಹೇಳಿದ್ದಾರೆ.